ಯಾದಗಿರಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆಯ ಛಾಯಾ ಭಗವತಿ ದೇವಸ್ಥಾನ ಈಗ ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗುವ ಹಂತಕ್ಕೆ ತಲುಪಿದೆ. ಇದರಿಂದಾಗಿ ದೇವಸ್ಥಾನಕ್ಕೂ ಕೂಡ ಈಗ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕೃಷ್ಣಾ ನದಿ ಅಪಾಯಮಟ್ಟ ಮೀರಿ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಸಿದೆ. ನದಿ ಪಾತ್ರದ ಜನ ಸೇರಿದಂತೆ ದೇವರಿಗೂ ಕೂಡ ಪ್ರವಾಹ ಸಂಕಷ್ಟ ಎದುರಾಗಿದೆ.
ನಾರಾಯಣಪುರದ ಕೃಷ್ಣಾ ನದಿ ತೀರದ ಜಿಲ್ಲೆಯ ಸುಪ್ರಸಿದ್ಧ ಛಾಯಾ ಭಗವತಿ ದೇಗುಲ ಈಗ ಮುಳುಗುವ ಹಂತ ತಲುಪಿದೆ. ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ನೀರು ಈಗ ದೇಗುಲದ ಮುಂಭಾಗದ ಮೆಟ್ಟಲುಗಳಿಗೆ ಸ್ಪರ್ಶ ಮಾಡಿದ್ದು, ಇನ್ನಷ್ಟು ನೀರಿನ ಪ್ರಮಾಣ ಹೆಚ್ಚಾದರೆ ದೇಗುಲ ಸಂಪೂರ್ಣ ಜಲಾವೃತಗೊಳ್ಳಲಿದೆ. ಕಳೆದ ವರ್ಷ ಪ್ರವಾಹದಲ್ಲಿ ಜಲಾವೃತಗೊಂಡ ಛಾಯಾ ಭಗವತಿ ದೇಗುಲಕ್ಕೆ ಮತ್ತೆ ಈಗ ಪ್ರವಾಹ ಭೀತಿ ಎದುರಾಗಿದೆ.