ಯಾದಗಿರಿ: ಶಿವನಿಗೆ ಪೂಜೆ ಮಾಡುವುದು ನಮ್ಮ ಸಂಕಲ್ಪ. ಶಿವಪೂಜೆ ಮಾಡೋಕೆ ಬಿಡದೇ ಇರುವುದು ಧಾರ್ಮಿಕ ಸ್ವಾತಂತ್ರ್ಯದ ಹರಣ. ಮುಸಲ್ಮಾನರಿಗೆ ಅವಕಾಶ ಕೊಟ್ಟು, ಹಿಂದೂಗಳಿಗೆ ನಿರ್ಬಂಧ ಹಾಕಿದ್ರೆ ಹೇಗೆ ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಶ್ನಿಸಿದರು.
ಮಂಗಳವಾರ ಯಾದಗಿರಿಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆಳಂದದಲ್ಲಿ ನಡೆಯಬೇಕಾದ ಕಾರ್ಯಕ್ರಮ ಮನುಷ್ಯ ನಿಯೋಜಿತ ಅಲ್ಲ. ಮಹಾಶಿವರಾತ್ರಿ ಎಂಬುವುದು ಪಂಚಾಂಗದಲ್ಲಿ ನಿರ್ಧಾರವಾಗಿರುತ್ತದೆ. ಎಲ್ಲಾ ಶಿವಾಲಯಗಳಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಹಾಗಾಗಿ ನಾವು ಆಳಂದದಲ್ಲಿ ಪೂಜೆ ಮಾಡಬೇಕೆಂದು ನಿರ್ಧರಿಸಿದ್ದೆವು. ಯಾವುದೇ ಧಾರ್ಮಿಕ ಸಭೆ, ಸಮಾರಂಭದ ಯೋಚನೆ ಇರಲಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಾಗಿತ್ತು ಎಂದು ಕಲಬುರಗಿ ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾಶಿವರಾತ್ರಿಯಂದು ಮುಸಲ್ಮಾನರು ಕಾರ್ಯಕ್ರಮ ಮಾಡುತ್ತಾರೆ ಎಂದು ಗೊತ್ತಿಲ್ಲ ಎನ್ನುತ್ತಾರೆ. ಅಧಿಕಾರಿಗೆ ಇದರ ಬಗ್ಗೆ ತಿಳಿಯದಿದ್ದರೆ ಹೇಗೆ, ಕಾನೂನು ಸುವ್ಯವಸ್ಥೆ ಕಾಪಾಡ್ತಾರೆ? ಎಂದು ಡಿಸಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಧಾರ್ಮಿಕ ಅಚರಣೆಗೂ, ಮನುಷ್ಯ ನಿಯೋಜಿತ ಕಾರ್ಯಕ್ರಮಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತೆ. ಶಿವನ ಪೂಜೆ ಮಾಡುವುದು ನಮ್ಮ ಸಂಕಲ್ಪ. ಮಾ.3 ರಂದು ನಿಷೇಧಾಜ್ಞೆ ಮುಗಿದ ಮೇಲೆ ಕಾರ್ಯಕರ್ತರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಇದನ್ನೂ ಓದಿ: ಕಲಬುರಗಿ: ದರ್ಗಾದಲ್ಲಿರುವ ಶಿವಲಿಂಗಕ್ಕೆ ಬಿಜೆಪಿ ಮುಖಂಡರಿಂದ ಪೂಜೆ
ಮುಸಲ್ಮಾನರಿಗೆ ಹಿಂದೂಗಳು ತೊಂದರೆ ಕೊಡುವುದಿಲ್ಲ. ಆದರೆ, ಮುಸಲ್ಮಾನರಿಂದ ಹಿಂದೂಗಳಿಗೆ ತೊಂದರೆ ಇದೆ. ಕೋರ್ಟ್ ನಿರ್ಧಾರ ಸ್ವಾಗತಿಸುತ್ತೇನೆ. ಯಾಕಂದ್ರೆ ನಮಗೆ ಪೂಜೆ ಮಾಡುವುದಕ್ಕೆ ಅವಕಾಶ ಕೊಟ್ಟಿದೆ. ಡಿಸಿ ಇನ್ನೊಂದು ಸಲ ಯೋಚನೆ ಮಾಡಲಿ. ಈ ತಾರತಮ್ಯ ಡಿಸಿಯವರ ಆತ್ಮಸಾಕ್ಷಿಗೆ ಒಪ್ಪುತ್ತಾ?, ಈ ತರಹದಿಂದಾಗಿ ಅಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ. 15 ಜನರು 3 ಗಂಟೆಗಳ ಕಾಲ ಪೂಜೆ ಮಾಡಬಹುದು ಎಂದು ಕೋರ್ಟ್ ಅವಕಾಶ ಕೊಟ್ಟಿದೆ ಎಂದು ಹೇಳಿದರು.