ವಿಜಯಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಇಲ್ಲಿಯವರೆಗೆ ಬಿಜೆಪಿಯಿಂದ ಒಬ್ಬರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರು ಸದಸ್ಯರು ಸೇರಿ ಒಟ್ಟು ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಸಾರವಾಡ ಜಿಪಂ ಕಾಂಗ್ರೆಸ್ ಸದಸ್ಯೆ ಸುಜಾತಾ ಕಳ್ಳಿಮನಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಸೂಚಕರಾಗಿದ್ದಾರೆ. ಬಿಜೆಪಿಯಿಂದ ಇಂಡಿ ತಾಲೂಕಿನ ನಿವರಗಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ ಸಲ್ಲಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಒಟ್ಟು 42 ಸದಸ್ಯರ ಬಲ ಹೊಂದಿದೆ. ಬಿಜೆಪಿ-20, ಕಾಂಗ್ರೆಸ್-18, ಜೆಡಿಎಸ್ -3 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಇದ್ದಾರೆ. ಜೆಡಿಎಸ್ ಪಕ್ಷ ಇಲ್ಲಿ ನಿರ್ಣಾಯಕವಾಗಲಿದೆ.
ಭಾರಿ ಪೊಲೀಸ್ ಭದ್ರತೆ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆ ಹಿನ್ನೆಲೆ ಕಚೇರಿಯಿಂದ ಮುಖ್ಯದ್ವಾರದವರೆಗೂ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಎಸ್ಪಿ ಅನುಪಮ ಅಗರವಾಲ ನೇತೃತ್ವದಲ್ಲಿ ಭದ್ರತೆ ನೀಡಲಾಗಿದ್ದು, 500 ಮೀಟರ್ ವರೆಗೆ ಬ್ಯಾರಿಕೇಡ್ ಹಾಕಿ ಭದ್ರತೆ ಒದಗಿಸಲಾಗಿದೆ.