ಬಳ್ಳಾರಿ/ಯಾದಗಿರಿ : ಎಐಸಿಸಿ ಯುವನಾಯಕಿ ಪ್ರಿಯಾಂಕ ಗಾಂಧಿಯವರನ್ನ ಉತ್ತರಪ್ರದೇಶ ಸರ್ಕಾರ ಬಂಧಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ ಎಸ್ ಮಹ್ಮದ ರಫೀಕ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಕೆಲಕಾಲ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಯವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಉತ್ತರಪ್ರದೇಶದ ಸೋನ್‌ಭದ್ರಾದಲ್ಲಿ ಹತ್ಯೆಗೊಳಗಾದ ಕುಟುಂಬಸ್ಥರಿಗೆ ಪ್ರಿಯಾಂಕಾ ಗಾಂಧಿ ಸಾಂತ್ವನ ಹೇಳಲು ತೆರಳುವಾಗ ಯುಪಿ ಬಿಜೆಪಿ ಸರ್ಕಾರ ಮಾರ್ಗ ಮಧ್ಯೆದಲ್ಲಿ ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸೋನ್‌ಭದ್ರಾದಲ್ಲಿ ನಡೆದ ಘಟನೆಗೆ ಕಾರಣೀಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಹೆಚ್.ಅನಿಲ್ ಲಾಡ್, ಮುಖಂಡರಾದ ಅಸುಂಡಿ ನಾಗರಾಜಗೌಡ, ಕೊಳಗಲ್ಲು ಅಂಜಿನಿ, ಬಿಎಂ ಪಾಟೀಲ ಸೇರಿದಂತೆ ಹತ್ತಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಯಾದಗಿರಿಯಲ್ಲಿಯೂ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಉತ್ತರಪ್ರದೇಶದ ಪೊಲೀಸ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡಸಿ, ಸಿಎಂ ಯೋಗಿ ಆದಿತ್ಯನಾಥ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ. ಪ್ರೀಯಾಂಕಾ ಗಾಂಧಿ ಸಂತ್ರಸ್ತ ಕುಟುಂಬದವರಿಗೆ ಸಂತಾಪ ಸೂಚಿಸಲು ಹೊರಟಿದ್ದಾಗ ಬಂಧಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
![Priyanka Gandhi arrested](https://etvbharatimages.akamaized.net/etvbharat/prod-images/3901480_protest.jpg)