ಸುರಪುರ : ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದೆ.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಮಾತನಾಡಿ, ನಾವು ಕೆಲಸ ನಿಲ್ಲಿಸಿ ಸುಮಾರು ಐದು ದಿನಗಳಿಂದ ಹೋರಾಟ ನಡೆಸಿದ್ದೇವೆ.
ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಆರೋಗ್ಯ ರಕ್ಷಣೆಗಾಗಿ ಸರಿಯಾದ ಕಿಟ್ ನೀಡಿಲ್ಲ. ಸ್ಯಾನಿಟೈಸರ್ ಆಗಲಿ, ಕರ ರಕ್ಷಾ ಕವಚಗಳಾಗಲಿ, ಮುಖಗವಸು ಸಹ ನೀಡಿಲ್ಲ. ಆದರೆ, ಹಗಲಿರುಳು ನಾವು ದುಡಿಯುತ್ತೇವೆ. ಆದರೆ, ಸರ್ಕಾರ ನಮ್ಮ ಶ್ರಮಕ್ಕೆ ಬೆಲೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.