ಸುರಪುರ(ಯಾದಗಿರಿ): ನಗರದಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.
ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ಜನ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮಾತನಾಡಿ, ಅಂಗನವಾಡಿ ನೌಕರರು ಕೊರೊನಾ ಸೈನಿಕರಾಗಿದ್ದಾರೆ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಅಗತ್ಯ ವಸ್ತುಗಳು ನೀಡಬೇಕೆಂದರು.
ಕೊರೊನಾ ಕೆಲಸಕ್ಕೆ 25,000 ರೂ. ಪ್ರೋತ್ಸಾಹ ಧನವನ್ನು ನೀಡಬೇಕು. ಮೇಲ್ವಿಚಾರಕಿಯರ ಹುದ್ದೆಗಳು ಶೇ.100ರಷ್ಟು ಮೀಸಲು ನೀಡಬೇಕು. ಅಂಗನವಾಡಿ ಕಾರ್ಯಕರ್ತರಿಗೆ 21,000 ರೂ. ವೇತನ ನಿಗದಿ ಮಾಡಬೇಕು, ಪ್ರತಿ ತಿಂಗಳ ಮೊಟ್ಟೆ ಬಿಲ್ ಮುಂಗಡವಾಗಿ ನೀಡಬೇಕು. ಆದಾಯ ತೆರಿಗೆ ಕಟ್ಟಲು ಸಾಮರ್ಥ್ಯವಿಲ್ಲದ ಕುಟುಂಬಗಳಿಗೆ 75,500ರೂ. ಸಹಾಯಧನ ನೀಡಬೇಕು. ಅಂಗನವಾಡಿ ನೌಕರರ ಮೇಲಾಗುವ ಹಲ್ಲೆಗಳು ನಡೆಯದಂತೆ ಎಚ್ಚರ ವಹಿಸಿ ಹಾಗೂ ಜನವಿರೋಧಿ ವಿದ್ಯುತ್ ಕಾಯ್ದೆ, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಮೂಲಕ ಸಲ್ಲಿಸಿದರು. ಬಸ್ಸಮ್ಮ ಆಲ್ಹಾಳ, ರಾಧಾಬಾಯಿ ಲಕ್ಷ್ಮಿಪುರ ,ನಸೀಮಾ ಮುದನೂರ,ಜಯಶ್ರೀ ಸಂಗೀತಾ ಹೆಮನೂರ ಶಕುಂತಲಾ ಜಗದೇವಿ ಚಂದ್ರಕಲಾ ಉಮಾ ಗೋನಾಲ ಇದ್ದರು.