ಯಾದಗಿರಿ: ಮೀನುಗಳನ್ನು ಕಾಯಲು ಹೋದ ಮೀನುಗಾರರು ಚಿರತೆ ಜೊತೆ ಸೆಣಸಾಡಿ ಮರು ಜೀವ ಪಡೆದಿದ್ದಾರೆ. ನಿನ್ನೆ ನಸುಕಿನ ಜಾವ ಈ ದುರ್ಘಟನೆ ಜರುಗಿದ್ದು, ಈಗ ಸುತ್ತಮುತ್ತಲಿನ ಗ್ರಾಮದ ಜನರಿಗೆ ಆತಂಕಕ್ಕೆ ಕಾರಣವಾಗಿದೆ.
ಮೀನಾಸಪುರ ಗ್ರಾಮದ ಮೀನುಗಾರರಾದ ಚಂದ್ರಪ್ಪ, ರಾಜಪ್ಪ ಹಾಗೂ ಹಣಮಂತ ಸೇರಿ ಕಳ್ಳರು ಕಾಟಕ್ಕೆ ಬೇಸತ್ತು ಮೀನುಗಳನ್ನು ಕಾಯಲು ಮಂಗಳವಾರ ರಾತ್ರಿ ಕೆರೆ ಪ್ರದೇಶಕ್ಕೆ ತೆರಳಿದ್ದರು. ನೀರಿನ ದಾಹ ನಿಗಿಸಿಕೊಳ್ಳಲು ಬುಧವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಚಿರತೆಯು ಕೆರೆ ಕಡೆ ಬಂದಿತ್ತು.
ಕೆರೆ ದಡದಲ್ಲಿ ಮೀನುಗಾರರು ಇರುವದನ್ನು ಗಮನಿಸಿ ಚಿರತೆ ಮೊದಲಿಗೆ ಚಂದ್ರಪ್ಪನ ಮೇಲೆ ದಾಳಿ ಮಾಡಿದೆ. ಚಂದ್ರಪ್ಪ ಗಾಯಗೊಂಡರೂ ಚಿರತೆಯನ್ನು ಎತ್ತಿ ಬಿಸಾಕಿದ್ದಾರೆ. ನಂತರ ಚಿರತೆಯು ರಾಜಪ್ಪ ಹಾಗೂ ಹಣಮಂತನ ಮೇಲೆ ದಾಳಿ ಮಾಡಿದೆ. ಮೂವರು ಗಾಯಗೊಂಡರೂ ಸಹ ಚಿರತೆ ವಿರುದ್ಧ ಹೋರಾಡಿದ್ದಾರೆ. ನಂತರ ಊರಿಗೆ ತೆರಳಿ ಗುರುಮಠಕಲ್ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ನಂತರ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶಕ್ಕೆ ತೆರಳಬೇಡಿ, ಚಿರತೆಗಳಿದ್ದು ಎಚ್ಚರಿಕೆಯಿಂದ ಇರಬೇಕೆಂದು ಜನರಿಗೆ ಸೂಚನೆ ನೀಡಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಮೀನಾಸಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಂತರ ನಿನ್ನೆ ಚಿರತೆ ದಾಳಿ ಮಾಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಈಟಿವಿ ನ್ಯೂಸ್ಗೆ ಗಾಯಗೊಂಡ ಚಂದ್ರಪ್ಪ ಮಾತನಾಡಿ, ಚಿರತೆ ದಾಳಿ ಮಾಡಿತ್ತು. ನಂತರ ನಾನು ಧೈರ್ಯ ಮಾಡಿ ಚಿರತೆಯನ್ನು ಎತ್ತಿ ಬಿಸಾಕಿ ಪ್ರಾಣ ಉಳಿಸಿಕೊಂಡಿದ್ದೇನೆ. ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಚಂದ್ರಪ್ಪನ ಆಗ್ರಹವಾಗಿದೆ.
ಈ ಬಗ್ಗೆ ಈಟಿವಿ ನ್ಯೂಸ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್ ಭಾವಿಕಟ್ಟಿ ಮಾತನಾಡಿ, ಮೀನಾಸಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅಗತ್ಯ ಮುಂಜಾಗ್ರತೆ ಕ್ರಮಕೈಗೊಂಡು ನಾಮಫಲಕ ಅಳವಡಿಸಲಾಗಿದೆ. ಜನರು ಯಾರು ಕೂಡ ಅರಣ್ಯ ಪ್ರದೇಶಕ್ಕೆ ತೆರಳಬಾರದು ಎಂದು ಹೇಳಿದ್ದಾರೆ.