ಯಾದಗಿರಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಈ ಅಪಘಾತದಲ್ಲಿ 13 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುನೀರ್ (40), ನಯಮ್ತ್ ಉಲ್ಲಾ (40), ಮೀಜಾ (50), ಮುದ್ದಸಿರ್ (12) ಮತ್ತು ಸುಮ್ಮಿ (13) ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇವರು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲಗೋಡು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಕಲಬುರುಗಿಯಲ್ಲಿ ನಡೆಯುತ್ತಿರುವ ದರ್ಗಾ ಉರುಸ್ ಜಾತ್ರೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ, ನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ಸುಮಾರು 18 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತಿದ್ದ ಕೂಡಲೇ ಸ್ಥಳೀಯರು ಮತ್ತು ವಾಹನ ಸವಾರರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ವಾಹನದಲ್ಲಿದ್ದ ಗಾಯಾಳುಗಳ ಆರೈಕೆ ಮಾಡಿದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಇನ್ನು ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಂಡರು. ವಾಹನದಿಂದ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಇನ್ನು ಆಯಿಷಾ, ಅನಸ್, ಸುಹಾನಾ, ರಮೀಜಾ, ಮಸಿ ಉಲ್ಲಾ, ಸೀಮಾ, ರಿಯಾಜ್ ಉನ್ಬೀ, ಮುಜ್ಜು, ನಸೀಮಾ, ಮಾಶುಮ್ ಬಾಷಾ, ಮುಜಕೀರ್, ಹನೀಫಾ, ಸೋಹೆಲ್ ಸೇರಿದಂತೆ 13 ಜನರು ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನೆಲ್ಲ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ?: ಲಾರಿ ಚಾಲಕನಿಗೆ ನಿದ್ದೆ ಬಂದ ಹಿನ್ನೆಲೆ ಆತ ತನ್ನ ವಾಹನವನ್ನು ರಸ್ತೆ ಬಿಟ್ಟು ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಆದ್ರೆ ಕ್ರೂಸರ್ ವಾಹನ ಚಾಲಕ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತಕ್ಕೆ ಕ್ರೂಸರ್ ವಾಹನದ ಚಾಲಕ ತಪ್ಪು ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ತನಿಖೆ ನಂತರವೇ ಈ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಈ ಘಟನೆ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬಾಲಸೋರ್ ರೈಲು ದುರಂತ ಸ್ಥಳದ ಇಂದಿನ ವೈಮಾನಿಕ ದೃಶ್ಯ
ಅಪಘಾತದಲ್ಲಿ ಐವರು ಸಾವು: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದರು. ದುರ್ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಜಿಲ್ಲಾ ಕೇಂದ್ರದಿಂದ ಸುಮಾರು 115 ಕಿಮೀ ದೂರದಲ್ಲಿರುವ ನಾಗಿಭೀಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪಾ ಗ್ರಾಮದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. ನಾಗ್ಪುರದಿಂದ ನಾಗಭೀಡ್‌ಗೆ ಕಾರಿನಲ್ಲಿ ಆರು ಜನರು ಪ್ರಯಾಣಿಸುತ್ತಿದ್ದಾಗ, ಈ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದೆ. ರಭಸದಿಂದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದರೆ, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದರು. ಒಟ್ಟು ಐವರು ಅಪಘಾತದಲ್ಲಿ ಮೃತಪಟ್ಟಿದ್ದರು.