ಮುದ್ದೇಬಿಹಾಳ: ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ತಾಲೂಕಿನ ಸರೂರ ಹಾಲುಮತ ರೇವಣಸಿದ್ದೇಶ್ವರ ಗುರುಪೀಠಕ್ಕೆ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಂಡಾರವೇ ಶ್ರೇಷ್ಠ ಎನ್ನುವಂತೆ ನನಗೆ ಹಾಲುಮತ ಗುರುಗಳ ಆಶೀರ್ವಾದವಿದ್ದ ಕಾರಣ ಇಂದು ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಸಿಗಲು ಸಾಧ್ಯವಾಗಿದೆ ಎಂದರು. ಸರೂರ ಗ್ರಾಮದ ದೇವಸ್ಥಾನಗಳಿಗೆ ಜಿಪಂ ವತಿಯಿಂದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಈ ಸ್ಥಾನಕ್ಕೇರಲು ಸಹಕಾರ ನೀಡಿದ ಪಕ್ಷದ ಹಿರಿಯ ನಾಯಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸರೂರ ಗ್ರಾಮಕ್ಕೆ ಭೇಟಿ ನೀಡಿದ್ದ ಕಳ್ಳಿಮನಿ ದಂಪತಿಗೆ ಗ್ರಾಮದ ಹಿರಿಯರಾದ ಗುರುವಿನ ಸಹೋದರರು, ಸಮಾಜದ ಮುಖಂಡರು ಸೇರಿದಂತೆ ಕವಡಿಮಟ್ಟಿ, ಶಿರೋಳ, ಕುಂಟೋಜಿ ಗ್ರಾಮದ ಗುರು-ಹಿರಿಯರು ಸನ್ಮಾನಿಸಿ ಗೌರವಿಸಿದರು.