ವಿಜಯಪುರ: ರಾಜ್ಯದ ಕರಾವಳಿ ತೀರ ಮೀನುಗಾರರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಈ ಭಾಗದ ಒಳನಾಡು ಮೀನುಗಾರರಿಗೂ ದೊರಕಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮೀನುಗಾರಿಕಾ ಸಹಕಾರಿ ಸಂಘಗಳ ಪ್ರತಿನಿಧಿಗಳು, ಮೀನುಗಾರರ ಕುಂದು-ಕೊರತೆ ಆಲಿಸಿ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕರಾವಳಿ ಭಾಗದ ಮೀನುಗಾರರಿಗೆ ಈಗಾಗಲೇ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ರೂ.ಗಳ ಸಾಲ ಯೋಜನೆ ಜಾರಿಯಲ್ಲಿದೆ. ಇದನ್ನು ಈ ಭಾಗದ ಬಡ ಮೀನುಗಾರರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಹೇಳಿದರು.
ಕೃಷಿ ರೈತರಿಗೆ ನೀಡಲಾದ ಕಿಸಾನ್ ಕ್ರೇಡಿಟ್ ಕಾರ್ಡನ್ನು ಮೀನುಗಾರರಿಗೂ ನೀಡಲಾಗಿದೆ. ಶೇ.3ರ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳ ಸಾಲ ಯೋಜನೆ ರಾಷ್ಟ್ರೀಯ ಬ್ಯಾಂಕ್‍ಗಳ ಮೂಲಕ ನೀಡಲಾಗುತ್ತಿದೆ. ಇದರಲ್ಲಿ 2 ಲಕ್ಷ ರೂ. ಗಳನ್ನು ಶ್ಯೂರಿಟಿ ಇಲ್ಲದೆ ನೀಡಲಾಗುತ್ತಿದೆ ಎಂದರು.
ಇದರ ಸೌಲಭ್ಯ ಅರ್ಹ ಮೀನುಗಾರ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಅದರಂತೆ ಪ್ರತಿ ವಿಧಾನಸಭಾವಾರು ಅರ್ಹ ಬಡ ಮೀನುಗಾರರಿಗೆ ಪಾರದರ್ಶಕ ರೀತಿಯಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಸಾಧನ ಮತ್ತು ಸಾಮಗ್ರಿಗಳನ್ನು ಪಾರದರ್ಶಕ ರೀತಿಯಲ್ಲಿ ಆಯಾ ಶಾಸಕರ ಸಮಕ್ಷಮ ವಿತರಣೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಕರಾವಳಿ ಕಡಲು ಮೀನುಗಾರಿಕೆಗೆ ಆದ್ಯತೆ ನೀಡಿದಂತೆ ಒಳನಾಡು ಮೀನುಗಾರಿಕೆಯನ್ನು ಇನ್ನಷ್ಟು ಸದೃಢ ಮತ್ತು ಅಭಿವೃದ್ಧಿಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿಗೆ ಒಟ್ಟು 20 ಲಕ್ಷ ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಒಟ್ಟು 3,500 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶವಿದೆ. ಜಿಲ್ಲೆಯ ಹಲವು ಕೆರೆಗಳಲ್ಲಿ ನೀರು ಭರ್ತಿಯಾಗಿದ್ದು, ಮೀನುಗಾರಿಕೆಗೆ ಉತ್ತೇಜನ ನೀಡಬೇಕು. ನಗರದ ಬೂತನಾಳ ಕೆರೆ ಅತ್ಯಂತ ಆಹ್ಲಾದಕರ ಪರಿಸರ, ಜಮೀನು ಮತ್ತು ನೀರಿನ ಸೌಲಭ್ಯ ಹೊಂದಿದೆ. ಮೀನುಗಾರಿಕೆ ಡಿಪ್ಲೋಮಾ ಕಾಲೇಜ್ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.