ವಿಜಯಪುರ: ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದಕ್ಕೆ ಕೋಪಗೊಂಡ ಯುವತಿಯ ಪೋಷಕರು ಮತ್ತು ಸಂಬಂಧಿಕರು ಯುವಕನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಜಾಲಗೇರಿ ಗ್ರಾಮದ ಪ್ರೇಮಿಗಳಾದ ಅಮರ್ (22) ಅರ್ಚನಾ (24) ಪ್ರೀತಿಸಿ ಮದುವೆಯಾಗಲು ಇಚ್ಛಿಸಿದ್ದರು. ಈ ಪ್ರೇಮ ವಿವಾಹಕ್ಕೆ ಎರಡು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದು ಇಬ್ಬರು ಪ್ರೇಮಿಗಳು ಓಡಿ ಹೋಗಿ ಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡ ಅರ್ಚನಾ ಪೋಷಕರು ಇದಕ್ಕೆಲ್ಲ ಯುವಕ ಅಮರ್ ಕುಟುಂಬ ಕಾರಣ ಎಂದು ಹೇಳಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವಿಷಯ ಓಡಿ ಹೋಗಿ ಮದುವೆ ಮಾಡಿಕೊಂಡಿರುವ ಪ್ರೇಮಿಗಳಿಗೆ ಗೊತ್ತಾಗಿದ್ದು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವತಿ ಅರ್ಚನಾ ಮಾತನಾಡಿ, "ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳಬೇಕು ಎಂದು ಇಚ್ಛೆಪಟ್ಟಿದ್ದೆವು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಮನೆ ಬಿಟ್ಟು ಬಂದು ಸರಳವಾಗಿ ವಿವಾಹ ಆಗಿದ್ದೇವೆ. ನಾನು ಮನೆಯಿಂದ ಯಾವುದೇ ಆಸ್ತಿ ತಂದಿಲ್ಲ. ಆದ್ರೆ ಈಗ ನಮ್ಮ ಪೋಷಕರು ಯುವಕ ಕುಟುಂಬದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನನ್ನ ಪತಿ ಅಮರ್ ಅವರ ಕುಟುಂಬದ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಪೋಷಕರು ಕಾರಣ. ಇದನ್ನು ನೀವೇ ತಡೆಯಬೇಕು" ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಅಮರ್ ಮಾತನಾಡಿ, "ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ನಮ್ಮ ಪೋಷಕರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬದವರನ್ನು ರಕ್ಷಣೆ ಮಾಡಿ" ಎಂದು ಮನವಿ ಮಾಡಿದರು.
ವಾರದ ಹಿಂದೆ ಮನೆ ಬಿಟ್ಟು ಬಂದ ಈ ಪ್ರೇಮಿಗಳು ಓಡಿ ಹೋಗಿ ಮದುವೆಯಾಗಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಅಂದ್ರೆ, ಸೆಪ್ಟೆಂಬರ್ 11 ರಂದು ಅಮರ್ ಪೋಷಕರ ಮೇಲೆ ಅರ್ಚನಾ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ: ಕುಟುಂಬಸ್ಥರ ಎದುರೇ ಆತ್ಮಹತ್ಯೆಗೆ ಶರಣಾದ ಜೋಡಿ