ವಿಜಯಪುರ: ಕರ್ತವ್ಯದಲ್ಲಿದ್ದಾಗ ಗಾಯಗೊಂಡಿದ್ದ ಎಎಸ್ಪಿ ರಾಮ ಅರಸಿದ್ಧಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಇಂದು ಕರ್ತವ್ಯಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿಲ್ಲೆಯ ಎಸ್ಪಿ, ಡಿಸಿ ಹಾಗೂ ಸಿಇಒಗಳು ಖುದ್ದು ಹಾಜರಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ಮೇ. 4ರಂದು ಕೊರೊನಾ ಕರ್ತವ್ಯದಲ್ಲಿದ್ದಾಗ ಬ್ಯಾರಿಕೇಡ್ ಸರಿಪಡಿಸುವ ಸಂದರ್ಭ ಹಿಂಬದಿಯಿಂದ ಬಂದ ಬೈಕ್ ಸವಾರ ಎಎಸ್ಪಿ ಅವರಿಗೆ ಡಿಕ್ಕಿ ಹೊಡೆದಿದ್ದ.
ಗಾಯಗೊಂಡು ವಿಜಯಪುರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಡಾ. ರಾಮ ಅರಸಿದ್ಧಿ ಇಂದು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಭರ್ಜರಿ ಸ್ವಾಗತಕ್ಕೆ ಎಎಸ್ಪಿ ಡಾ. ರಾಮ ಅರಸಿದ್ಧಿ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ತಿಂಗಳ ಹಿಂದೆ ಎಎಸ್ಪಿ ಅರಸಿದ್ಧಿ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಸಾವನ್ನು ಗೆದ್ದು ಬಂದಿದ್ದಲ್ಲದೇ ತಕ್ಷಣ ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಅವರ ಕಾರ್ಯಕ್ಷಮತೆ ಎಲ್ಲರಿಗೂ ಮಾದರಿಯಾಗಲಿ ಎಂದರು.
ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾದ ಎಎಸ್ಪಿ ರಾಮ ಅರಸಿದ್ಧಿ ಮಾತನಾಡಿ, ಅಪಘಾತವಾದಾಗ ನನ್ನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈಗ ವೈದ್ಯರ ಸತತ ಪರಿಶ್ರಮ, ಹಿರಿಯ ಅಧಿಕಾರಿಗಳ ಹಾರೈಕೆಯಿಂದ ಗುಣಮುಖನಾಗಿ ಕರ್ತವ್ಯಕ್ಕೆ ಹಾಜರಾಗಿದ್ದು ಖುಷಿ ತಂದಿದೆ ಎಂದರು.