ವಿಜಯಪುರ: ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಬಬಲೇಶ್ವರ ಶಾಂತವೀರ ಕಾಲೇಜು ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜನಸಂಖ್ಯಾ ಜಾಗೃತಿ ಜಾಥಾಕ್ಕೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಭಾಗವಾನ್ ಹಾಗೂ ಪ್ರಾಂಶುಪಾಲ ಬಬಲೇಶ್ವರ ಶಾಂತವೀರ ಕಾಲೇಜು ಪ್ರಾಂಶುಪಾಲ ವಿ.ಆರ್.ಚೌಧರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎನ್.ಆರ್.ಭಗವಾನ್ ಮಾತನಾಡಿ, ಜನಸಂಖ್ಯಾ ಹೆಚ್ಚಳದಿಂದ ದೇಶದ ಪ್ರಗತಿ ಕುಂಠಿತವಾಗುವುದಲ್ಲದೇ, ಜನದಟ್ಟಣೆಯಿಂದ ಆರ್ಥಿಕತೆ ಕುಸಿತ, ಬೀದಿ ಬೀದಿಗಳಲ್ಲಿ ಕೊಳಚೆ ಪ್ರದೇಶ ಉದ್ಭವಿಸುವುದು. ಇದರಿಂದ ಅನಾರೋಗ್ಯ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಜನಸಂಖ್ಯೆ ನಿಯಂತ್ರಿಸಿ ನೆಮ್ಮದಿಯ ಬದುಕು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಿನ ಆರೋಗ್ಯ ಅಧಿಕಾರಿ ಡಾ.ಕವಿತಾ ಮಾತನಾಡಿ, ಅನಾರೋಗ್ಯದ 10 ಮಕ್ಕಳಿಗೆ ಜನ್ಮ ನೀಡುವುದಕ್ಕಿಂತ ಆರೋಗ್ಯಯುತ ಒಂದು ಮಗು ಜನಿಸಿದರೆ ದೇಶದ ಸಂಪತ್ತು ವೃದ್ದಿಯಾಗುತ್ತದೆ, ಆರೋಗ್ಯವಂತ ಒಂದು ಮಗುವಿನಿಂದ ದೇಶಕ್ಕೆ ಮಾರಕವಾಗುವ ಬಡತನ, ನಿರುದ್ಯೋಗ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಟೋಬೇಕ್ಟಮಿ, ಲೇಪ್ರಸ್ಕೋಪಿಕ್, ಎನ್.ಎಸ್.ವಿ ವಿಧಾನಗಳನ್ನು ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಒಪಿ, ನಿರೋಧ, ಚುಚ್ಚುಮದ್ದುಗಳ ಬಗ್ಗೆ ತಿಳಿಸಿ ಇವುಗಳಿಂದ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ಇನ್ನು ಜಾಥಾ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಎಮ್.ಸಿ.ನಿಗಶೆಟ್ಟಿ, ಡಾ.ಎಸ್.ಐ.ಬಿರಾದಾರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.