ಮುದ್ದೇಬಿಹಾಳ: ಪಟ್ಟಣದ ಹುಡ್ಕೋದ ಮಾರುತೇಶ್ವರ ದೇವಸ್ಥಾನದಲ್ಲಿಂದು ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಕಿಡ್ನಿ ದಾನಿ ಕುಸುಮಾ ಮಠ ಅವರನ್ನು ಪುರಸಭೆ ಸದಸ್ಯರು, ಸಮಾನ ಮನಸ್ಕ ಗೆಳೆಯರ ಬಳಗದವರು ಸನ್ಮಾನಿಸಿದರು.
ಪಟ್ಟಣದ ವಿದ್ಯಾನಗರದ ನಿವಾಸಿ, ಪುರಸಭೆ ಮಾಜಿ ಸದಸ್ಯ, ಕರ್ನಾಟಕ ಅರ್ಬನ್ ಬ್ಯಾಂಕ್ ನಿರ್ದೇಶಕ ಶರಣು ಬೂದಿಹಾಳಮಠ ಅವರು ಕಿಡ್ನಿ ವೈಫಲ್ಯದಿಂದ ಕೆಲವು ವರ್ಷದ ಹಿಂದೆ ತೊಂದರೆಗೊಳಗಾಗಿ ಆಸ್ಪತ್ರೆಗೆ ಸೇರಿದ್ದರು. ಆಗ ಅವರ ಜೀವ ಉಳಿಸಲು ಮುಂದೆ ಬಂದಿದ್ದು ಅವರ ಅತ್ತೆ ಕುಸುಮಾ ಮಠ. ಅವರೀಗ ಶರಣು ಬೂದಿಹಾಳಮಠ ಅವರಿಗೆ ಕಿಡ್ನಿ ದಾನ ಮಾಡಿದ್ದರಿಂದ ಎಲ್ಲರಂತೆ ಬದುಕು ನಡೆಸುವಂತಾಗಿದೆ. ಹಾಗಾಗಿ ಇಂದು ಕುಸುಮಾ ಮಠ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಅಂಗಾಂಗ ದಾನ ಸರ್ವಶ್ರೇಷ್ಠ ದಾನವಾಗಿದೆ. ಪ್ರತಿಯೊಬ್ಬರೂ ಇನ್ನೊಂದು ಜೀವ ಉಳಿಸುವ ಸಲುವಾಗಿ ಅಂಗ ದಾನ ಮಾಡಲು ಮುಂದೆ ಬರುವ ಮನಸ್ಸು ಮಾಡಬೇಕು ಎಂದು ಹೇಳಿದರು. ಮನುಷ್ಯನ ದೇಹದಲ್ಲಿರುವ ಎರಡು ಕಿಡ್ನಿಗಳಲ್ಲಿ ಒಂದನ್ನು ದಾನ ಮಾಡಿ, ಇನ್ನೊಂದು ಕಿಡ್ನಿಯಿಂದ ಜೀವನ ನಡೆಸಬಹುದು. ಅದಕ್ಕೆ ಇದು ಪ್ರತ್ಯಕ್ಷ ಉದಾಹರಣೆ. ಶರಣು ಬೂದಿಹಾಳಮಠ ತಮ್ಮ ಅತ್ತೆಯವರ ಕಿಡ್ನಿಯನ್ನು ದಾನವಾಗಿ ಪಡೆದುಕೊಂಡು ಇಂದು ಎಲ್ಲರಂತೆ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.