ವಿಜಯಪುರ: ನಗರದ ಬೃಹತ್ ಆಹಾರ ಶೇಖರಣಾ ಗೋದಾಮಿನಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಘಟನೆ ನಡೆದಿದೆ. ರಾಜಗುರು ಇಂಡಸ್ಟ್ರೀಸ್ ಗೋದಾಮು ಇದಾಗಿದ್ದು, ಫುಡ್ ಪ್ರೊಸೆಸಿಂಗ್ ಯುನಿಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಮೆಕ್ಕೆಜೋಳದ ಚೀಲಗಳು ಕುಸಿದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮೆಕ್ಕೆಜೋಳದ ಅಡಿಯಲ್ಲಿ ಸಿಲುಕಿದವರು ಬಿಹಾರ ಮೂಲದ ಕಾರ್ಮಿಕರೆಂದು ತಿಳಿದು ಬಂದಿದ್ದು, ನಾಲ್ಕು ಜೆಸಿಬಿಗಳಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ.
![ರಕ್ಷಣಾ ಕಾರ್ಯಾಚರಣೆ](https://etvbharatimages.akamaized.net/etvbharat/prod-images/04-12-2023/20180856_bjp-1.jpg)
ಕಾರ್ಮಿಕರು ಕಳೆದ ಹಲವು ವರ್ಷಗಳಿಂದ ಇದೇ ಇಂಡಸ್ಟ್ರೀಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಇಂದು ಸಹ ಕೆಲಸಕ್ಕೆ ತೆರಳಿದ್ದರು. ಆದರೆ, ಹಠಾತ್ ಮೆಕ್ಕೆಜೋಳದ ಚೀಲಗಳು ಕುಸಿದು ಬಿದ್ದಿದ್ದರಿಂದ ಅದರ ಅಡಿಯಲ್ಲಿ ಸಿಲುಕಿದ್ದಾರೆ. ಕಳೆದ ಎರಡು ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಎಸ್ ಪಿ ಋಷಿಕೇಶ ಸೋನಾವಣೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.
![ಗೋದಾಮಿನಲ್ಲಿ ಸಿಲುಕಿರುವ ಕಾರ್ಮಿಕರು](https://etvbharatimages.akamaized.net/etvbharat/prod-images/04-12-2023/20180856_bjp-3.jpg)