ಮುದ್ದೇಬಿಹಾಳ: ತಾಲೂಕಿನ ಗರಸಂಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ತಹಶೀಲ್ದಾರ್, ತಾ.ಪಂ. ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಮಹಿಳೆಯರು ತಹಶೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮಹಿಳೆಯರು, ಗರಸಂಗಿ ಗ್ರಾಮದಲ್ಲಿ ಮಾಯಪ್ಪ ಮಾದರ ಮನೆಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ರುದ್ರಪ್ಪ ಮೇಟಿ ಕಿರಾಣಿ ಅಂಗಡಿಯಲ್ಲಿ ಸಾರಾಯಿ ಮಾರುತ್ತಿದ್ದಾರೆ. ಇದರಿಂದ ಊರಿನಲ್ಲಿರುವ ಯುವಕರು, ಅಪ್ರಾಪ್ತರು ಯಾವಾಗ ಬೇಕೋ ಆಗ ಸಾರಾಯಿ ಕುಡಿಯಲು ಹೋಗುತ್ತಿದ್ದಾರೆ.
ಇದರಿಂದಾಗಿ ಮಹಿಳೆಯರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಕುಡಿದು ಮನೆಗೆ ಬರುವ ಗಂಡಂದಿರು ಮಹಿಳೆಯರಿಗೆ ದೈಹಿಕ ಹಿಂಸೆ ಕೊಡುತ್ತಿದ್ದಾರೆ. ಹೆಣ್ಣು ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಹಾಳುಗುತ್ತಿದ್ದು, ನಿತ್ಯವೂ ಜಗಳಗಳಾಗುತ್ತಿವೆ. ಮಾದಿಗರ ಕಾಲೊನಿಯಲ್ಲಿ ಮದ್ಯ ಮಾರಾಟ ಮಾಡದಂತೆ ಸರ್ಕಾರದ ನಿರ್ದೇಶನವಿದ್ದರೂ ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೂರಿದರು.
ಮಾದಿಗ ದಂಡೋರ ಮೀಸಲಾತಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರ ಹುಲ್ಲೂರ ಮಾತನಾಡಿ, ಗರಸಂಗಿಯಲ್ಲಿ ಕಾನೂನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.