ವಿಜಯಪುರ: ಖಾಸಗಿ ಆಸ್ಪತ್ರೆಯ ಖರ್ಚು ಭರಿಸಲಾಗದೆ ಬಹಳಷ್ಟು ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಥವಾ ಅಲ್ಲಿದ್ದವರ ನಿರ್ಲಕ್ಷ್ಯದಿಂದಲೋ ಬಹಳಷ್ಟು ಬಾರಿ ಗಂಭೀರ ಸ್ವರೂಪದ ಅಚಾತುರ್ಯಗಳಾಗುತ್ತವೆ. ಇದಕ್ಕೊಂದು ಹೊಸ ನಿದರ್ಶನ ಸಿಕ್ಕಿದೆ. ಹೆರಿಗೆ ನೋವು ತಾಳಲಾರದೆ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ಜಿಲ್ಲೆಯ ನಾಗಠಾಣ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಗ್ಗೆ ನಡೆಯಿತು.
ಚವ್ಹಾಣ ದೊಡ್ಡಿಯ ಅನು ಬೀವು ಕೊಳೆಕರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ-ಮಗು ಆರೋಗ್ಯವಾಗಿದ್ದಾರೆ. ಅನು ಅವರಿಗೆ ಇದು ಎರಡನೇ ಹೆರಿಗೆ. ಬೆಳಗ್ಗೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆರೋಗ್ಯ ಕೇಂದ್ರದ ಬಾಗಿಲು ತೆರೆದಿರಲಿಲ್ಲ. ನೋವು ಜಾಸ್ತಿಯಾಗಿದ್ದು ಅವರ ದೊಡ್ಡಮ್ಮ ಇಟಾಬಾಯಿ ಕೆಲವು ಮಹಿಳೆಯರ ಸಹಾಯ ಪಡೆದು ಆಸ್ಪತ್ರೆ ಆವರಣದಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆಯಾಗಿ ಅರ್ಧ ಗಂಟೆ ಕಳಎದರೂ ನವಜಾತ ಶಿಶುವಿನ ಹುಕ್ಕಳಿನ ದಾರ ತುಂಡರಿಸದ ಕಾರಣ ಬಾಣಂತಿ ನರಳಾಡಿದ್ದಾರೆ. ಬಳಿಕ ಬಂದ ಆಸ್ಪತ್ರೆಯ ನರ್ಸ್ ಬಾಣಂತಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಾಲ್ಕು ತಿಂಗಳ ಮಗು ಸಾವು.. ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ
ಆಕ್ರೋಶ: ಸಕಾಲಕ್ಕೆ ಬಾರದ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ಮಹಿಳೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಸಮಯ ಪಾಲನೆ ಮಾಡದೇ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ಒಳಾಂಗಣ ದಾರಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
'ಗಮನಕ್ಕೆ ಬಂದಿಲ್ಲ': ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಹೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಚ್‌ಒ ರಾಜಕುಮಾರ ನೆರಗಲ್ಲ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. "ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುತ್ತೇನೆ" ಎಂದರು.
ಇದನ್ನೂ ಓದಿ: ಹೆರಿಗೆ ನೋವು.. ಗರ್ಭಿಣಿಯನ್ನು 70 ಕಿಮೀ ದೂರದ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಯೋಧರು