ವಿಜಯಪುರ: ವೀಕೆಂಡ್ ಕರ್ಫ್ಯೂ ಜಾರಿಯಾದ ಕಾರಣ ಜಿಲ್ಲಾದ್ಯಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಮಾಹಿತಿ ನೀಡಿದರು.
ಎರಡು ದಿನ ವೀಕೆಂಡ್ ಕರ್ಫ್ಯೂನಿಂದಾಗಿ ಸುಮಾರು 70 ರಿಂದ 80 ಲಕ್ಷ ರೂ. ನಷ್ಟವಾಗಿದೆ. ಶನಿವಾರ ಶೇ. 40 ಹಾಗೂ ಭಾನುವಾರ ಶೇ. 60 ರಷ್ಟು ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಶೇ.100 ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕೊರೊನಾ ವಿರುದ್ಧ ಹೋರಾಡಲು ನಮ್ಮೆಲ್ಲಾ ಸಿಬ್ಬಂದಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸಕ್ಕೆ ಬರುವಂತೆ ಸೂಚಿಸಿದ್ದೇವೆ. ಪ್ರಯಾಣಿಕರು ಕೂಡಾ ಮಾಸ್ಕ್ ಧರಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿಜಯಪುರ, ಮಹಾರಾಷ್ಟ್ರ ಗಡಿಭಾಗದಲ್ಲಿ ಬಸ್ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು. ಹೀಗಿದ್ದಲ್ಲಿ ಮಾತ್ರ ಮಹಾರಾಷ್ಟ್ರದಿಂದ ವಿಜಯಪುರ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.