ವಿಜಯಪುರ: ಭೀಮಾ ನದಿ ತೀರದಲ್ಲಿ ಮಳೆ ನಿಂತರೂ ಪ್ರವಾಹ ಭೀತಿ ಮಾತ್ರ ನಿಂತಿಲ್ಲ. ಉಕ್ಕಿ ಹರಿಯುತ್ತಿರುವ ಭೀಮಾ ನದಿ ನೀರಿನಿಂದ ನದಿ ತೀರದ ಜನರು ತತ್ತರಿಸಿದ್ದಾರೆ.
ನಿನ್ನೆ ಸಂಪರ್ಕ ಕಳೆದುಕೊಂಡಿದ್ದ ತಾರಾಪುರದಲ್ಲಿ ಇಂದೂ ಕೂಡ ಅದೇ ಪರಿಸ್ಥಿತಿ ಮುಂದುವರೆದಿದೆ. ನಡುಗಡ್ಡೆಯಾದ ತಾರಾಪುರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ರಾತ್ರಿಯಿಂದಲೇ ಏರಿಕೆಯಾಗುತ್ತಿರುವ ನೀರಿನಿಂದ ಜನ-ಜಾನುವಾರುಗಳನ್ನು ರಕ್ಷಿಸಬೇಕೆಂದು ಆಲಮೇಲ ತಾಲೂಕಿನ ತಾರಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಗ್ರಾಮದಿಂದ ತಮ್ಮನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರವಾಹದಿಂದ ತತ್ತರಿಸಿದರೂ ಸಹ ಜಿಲ್ಲಾಡಳಿತ ಇಲ್ಲಿಯವರೆಗೆ ಬೋಟ್ ನೀಡಿಲ್ಲ. ಗ್ರಾಮದಲ್ಲಿ 100ರಕ್ಕೂ ಅಧಿಕ ಕುಟುಂಬಗಳು ನೀರಿನಲ್ಲಿ ಸಿಲುಕಿಗೊಂಡು ಸಂಕಷ್ಟ ಅನುಭವಿಸುತ್ತಿವೆ. ಕ್ಷಣ ಕ್ಷಣಕ್ಕೂ ಏರುತ್ತಿರುವ ನೀರಿನಿಂದ ಜನರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.