ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿರುವ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಸಂಬಂಧ ವಂಚನೆ ಆರೋಪ ಕೇಳಿಬಂದಿದೆ. ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ನಕಲಿ ಲೆಟರ್‌ಹೆಡ್‌ಗಳನ್ನು ಬಳಸಿಕೊಂಡು ಸಾಕಷ್ಟು ಜನರಿಂದ ಹಣ ಸುಲಿಗೆ ಮಾಡಿರುವ ವದಂತಿ ಹಬ್ಬಿದೆ. ಈ ವದಂತಿಗಳ ಹಿನ್ನೆಲೆಯಲ್ಲಿ ವಿವಿ ತಕ್ಷಣ ಎಚ್ಚೆತ್ತುಕೊಂಡಿದ್ದು, ಯಾವುದೇ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ, ಯಾರೂ ಕೂಡ ಮೋಸ ಹೋಗಬೇಡಿ ಎಂದು ಪ್ರಕಟಣೆ ಹೊರಡಿಸಿದೆ.
ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿಲ್ಲ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳಿಗೆ ನೌಕರಿ ಕೊಡಿಸೋದಾಗಿ ಸಾಕಷ್ಟು ಜನರಿಂದ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ. ಆದ್ರೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ವಿವಿ ಸ್ಪಷ್ಟಪಡಿಸಿದೆ.
ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರ್‌ಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ. ಈ ವಿಚಾರ ವಿವಿ ಗಮನಕ್ಕೆ ಬಂದಿದೆ. ಇಂಥ ವ್ಯಕ್ತಿಗಳ ಮೋಸದ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕುಲಸಚಿವ ಪ್ರೊ.ಬಿ.ಎಸ್.ನಾವಿ ಪ್ರಕಟಣೆ ಹೊರಡಿಸಿದ್ದಾರೆ. ಈ ರೀತಿ ಯಾರೇ ವಂಚನೆಗೆ ಒಳಗಾಗಿದ್ರೂ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವದಾಗಿ ವಿಜಯಪುರ ಎಸ್ಪಿ ಹೆಚ್.ಡಿ. ಆನಂದ ಕುಮಾರ ತಿಳಿಸಿದ್ದಾರೆ.
ರಾಜ್ಯದ ಏಕೈಕ ಹಾಗೂ ಅತಿದೊಡ್ಡ ವಿವಿ ಆಗಿರುವುದರಿಂದ ಸಾಕಷ್ಟು ಹುದ್ದೆಗಳು ಖಾಲಿ ಇರುತ್ತವೆ ಎಂಬುದು ಜನರ ಲೆಕ್ಕಾಚಾರ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಇಲ್ಲಿನ ಕುಲಸಚಿವರು, ಸಹಾಯಕ ಕುಲಸಚಿವರ ಸಹಿ ಫೋರ್ಜರಿ ಮಾಡಿ ನಕಲಿ ಪತ್ರಗಳೊಂದಿಗೆ ವಂಚಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ ಮಾಡಿಸುವುದಾಗಿ ಯಾರಾದರೂ ಹೇಳುತ್ತಿದ್ದಲ್ಲಿ ಅಂಥವರ ಹೆಸರನ್ನು ವಿಶ್ವವಿದ್ಯಾನಿಲಯದ ಗಮನಕ್ಕೆ ತರಬೇಕು. ಸಮೀಪದ ಪೊಲೀಸ್ ಠಾಣೆಗಳನ್ನೂ ಸಂಪರ್ಕಿಸಬಹುದು. ಯಾರಾದರೂ ಇಂತಹ ಮೋಸದ ಜಾಲದಲ್ಲಿ ಸಿಲುಕಿದ್ದರೆ ಅದಕ್ಕೆ ವಿಶ್ವವಿದ್ಯಾನಿಲಯವು ಹೊಣೆಯಲ್ಲ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದ್ರೆ ಪ್ರಕಟಣೆಯಲ್ಲಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರ್‌ಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ. ಹಾಗಿದ್ರೆ ಈ ವಂಚನೆಯನ್ನು ವಿವಿಯಲ್ಲಿ ಇರುವವರೇ ಮಾಡಿದ್ದಾರೋ ಅಥವಾ ಹೊರಗಿನವರು ಮಾಡಿದ್ದಾರೋ ಎಂಬ ಗೊಂದಲ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವಿವಿ ಕುಲಪತಿಗಳು, ಕಾನೂನು ತಜ್ಞರನ್ನು ಸಂಪರ್ಕಿಸಿ, ದೂರು ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿವಿ ಸೂಚಿಸಿದ ದಿನಾಂಕ ಮುಗಿದ ಬಳಿಕವೂ ವಿದ್ಯಾರ್ಥಿಗೆ ಅಡ್ಮಿಷನ್: ಕಾಲೇಜಿಗೆ ₹5 ಲಕ್ಷ ದಂಡ