ವಿಜಯಪುರ: ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಮೂರು ಸ್ಥಾನ ಸಿಕ್ಕಿದ್ದವು. ಕಾಂಗ್ರೆಸ್ನ ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಜೆಡಿಎಸ್ನ ಎಂ.ಸಿ. ಮನಗೂಳಿ ಸಚಿವರಾಗಿದ್ದರು. ಆದರೆ, ಬಿಜೆಪಿ ಮಂಗಳವಾರ ರಚಿಸಿದ ಸಂಪುಟದಲ್ಲಿ ಜಿಲ್ಲೆಯನ್ನು ಕಡೆಣಿಸಲಾಗಿದೆ ಎಂದು ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದಾರೆ.
ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್, ಎ.ಎಸ್. ಪಾಟೀಲ್ ನಡಹಳ್ಳಿ, ಸೋಮನಗೌಡ ಪಾಟೀಲ್ ಸಾಸನೂರ ಶಾಸಕರಾಗಿದ್ದಾರೆ. ಅರುಣ ಶಹಾಪುರ, ಹನುಮಂತ ನಿರಾಣಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಎರಡು ಬಾರಿ ಸಂಸದ, ಎರಡು ಸಲ ಶಾಸಕ, ಒಂದು ಬಾರಿ ಪರಿಷತ್ ಸದಸ್ಯರಾಗಿ ಮತ್ತು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಯತ್ನಾಳ್ಗೆ ಸಚಿವ ಸ್ಥಾನ ತಪ್ಪಲು ಜಿಲ್ಲಾ ಮುಖಂಡರ ವಿರೋಧವೇ ಕಾರಣ ಎನ್ನಲಾಗ್ತಿದೆ.
ಲೋಕಸಭೆ ಚುನಾವಣೆ ವೇಳೆ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜಿಲ್ಲೆಗೆ ಬಂದರೂ ಪ್ರಚಾರದಲ್ಲಿ ಯತ್ನಾಳ್ ಪಾಲ್ಗೊಂಡಿರಲಿಲ್ಲ. ಯತ್ನಾಳ್ ಬೆಂಬಲಿಗರು ಬಿ.ಎಲ್. ಸಂತೋಷ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದ ಅಭ್ಯರ್ಥಿ ಗೋಪಾಲ್ ಕಾರಜೋಳರ ಬದಲಿಗೆ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌಹ್ಹಾಣನನ್ನು ಬೆಂಬಲಿಸಿದ್ದರು. ಅಲ್ಲದೆ ಅರುಣ ಶಹಾಪುರ ಹಾಗೂ ಮಾಜಿ ಸಚಿವ ಅಪ್ಪಾ ಸಾಹೇಬ್ ಪಟ್ಟಣಶಟ್ಟಿ ವಿರೋಧದಿಂದಾಗಿಯೂ ಸಚಿವ ಸ್ಥಾನ ಕೈತಪ್ಪಿದೆ ಎಂದು ಹೇಳಲಾಗ್ತಿದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಪರ ಬಹಿರಂಗವಾಗಿ ಬ್ಯಾಟಿಂಗ್ ಮಾಡಿದ್ದು ಯತ್ನಾಳಗೆ ಮುಳುವಾಗಿದೆ. ಯಡಿಯೂರಪ್ಪ ಅವರು ಎಂ.ಬಿ. ಪಾಟೀಲ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಭಾಷಣ ಮಾಡಿದ್ದರು. ಆದರೆ, ಯತ್ನಾಳ್ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದರು.
ಎ.ಎಸ್. ಪಾಟೀಲ್ ನಡಹಳ್ಳಿ ಸತತವಾಗಿ 3ನೇ ಬಾರಿ ಶಾಸಕರಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ನಿಂದ ಬಿಜೆಪಿ ಸೇರಿ, ಮುದ್ದೇಬಿಹಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಎರಡು ಬಾರಿ ಕಾಂಗ್ರೆಸ್ನಿಂದ ದೇವರಹಿಪ್ಪರಗಿ ಕ್ಷೇತ್ರದಿಂದ ಶಾಸಕರಾಗಿದ್ದರು. ಇನ್ನು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಅವರು ಮೊದಲ ಬಾರಿಗೆ ಆಯ್ಕೆಯಾದ ಕಾರಣ ಸಚಿವ ಸ್ಥಾನ ಲಭಿಸಿಲ್ಲ ಎನ್ನಲಾಗಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಎರಡನೇ ಹಂತದಲ್ಲಿ ಸಂಪುಟದಲ್ಲಿ ಜಿಲ್ಲೆಯ ಶಾಸಕರು ಇರಲಿದ್ದಾರೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿದೆ.