ವಿಜಯಪುರ: ಜಿಲ್ಲೆಯಾದ್ಯಂತ ಕಳಪೆ ಮಟ್ಟದ ಕೃಷಿ ಬೆಳೆ ಔಷಧಿ (ಕೀಟನಾಶಕ) ಮಾರಾಟದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ನಿನ್ನೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 17ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜಾತಾ ಕಳ್ಳಿಮನಿ, ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು ರೈತರಿಗೆ ಸಕಾಲಕ್ಕೆ ನೆರವಾಗಬೇಕು. ಅದರಂತೆ ರಾಸಾಯನಿಕ ಮಿಶ್ರಿತ ಕೀಟನಾಶಕಗಳನ್ನು ವಿವಿಧ ಮಾರಾಟಗಾರರು ಮಾರಾಟ ಮಾಡುತ್ತಿರುವ ಬಗ್ಗೆ ಜಿಪಂ ಸದಸ್ಯರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಜಾಗೃತ ದಳಗಳು ಮತ್ತು ಸಹಾಯಕ ನಿರ್ದೇಶಕರುಗಳನ್ನು ಚುರುಕುಗೊಳಿಸಿ ಇಂತಹ ಕಳಪೆ ಗುಣಮಟ್ಟದ ಕೀಟನಾಶಕ ವ್ಯಾಪಾರಸ್ಥರನ್ನು ಪತ್ತೆ ಹಚ್ಚಿ ಲೈಸನ್ಸ್ ರದ್ಧತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನ ಮತ್ತು 14ನೇ ಹಣಕಾಸು ಅನುದಾನ ದುರ್ಬಳಕೆಗೆ ಸಂಬಂಧಪಟ್ಟಂತೆ ಸದಸ್ಯರಿಂದ ದೂರುಗಳು ಬಂದಿವೆ. ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳ ಮೂಲಕ ಸಂಬಂಧಪಟ್ಟ ಅಭಿಯಂತರರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಸದಸ್ಯರಿಂದ ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಲು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಂಡ ಕಾರ್ಯಗಳಿಗೆ ಸಂಬಂಧಪಟ್ಟಂತೆ ಸಂಬಂಧಿಸಿದ ಪಿಡಿಒ ವಿರುದ್ಧ ಹಾಗೂ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿ ರಚಿಸಬೇಕು. ಎನ್ಆರ್ಇಜಿಎ, 14ನೇ ಹಣಕಾಸು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರ ಅಭಿವೃದ್ಧಿ ಅನುದಾನ ದುರ್ಬಳಕೆ ಕುರಿತು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ 13 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿಯಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಪುನಃ ಜಂಟಿ ಸಮೀಕ್ಷೆ ವರದಿ ಸಲ್ಲಿಸಲು ತಿಳಿಸಿದ್ದು, ಅದರನ್ವಯ ಸೂಕ್ತ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಸಭೆಗೆ ತಿಳಿಸಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕರ್ತವ್ಯ ಲೋಪದ ಬಗ್ಗೆ ಸದಸ್ಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಿದರು. ಬಳಿಕ, ಅಲ್ಪ ಕಾಲದಲ್ಲಿಯೇ ಅಭಿವೃದ್ಧಿ ಆಗಬೇಕಾಗಿದ್ದು, ಜಿಲ್ಲಾ ಪಂಚಾಯತ್ನ ಎಲ್ಲಾ ಸದಸ್ಯರ ಸಹಕಾರವನ್ನು ಜಿಪಂ ಅಧ್ಯಕ್ಷರು ಕೋರಿದರು.
ಸ್ಥಾಯಿ ಸಮಿತಿಗಳ ಕ್ರಿಯಾ ಯೋಜನೆಗಳ ಅನುಮೋದನೆ: ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿಗಳ ಸಭೆಯನ್ವಯ 2020-21ನೇ ಸಾಲಿನ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 457.09 ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.