ವಿಜಯಪುರ: 2003ರಲ್ಲಿ ಸ್ಥಾಪನೆಯಾಗಿರುವ ಮಹಿಳಾ ವಿಶ್ವವಿದ್ಯಾನಿಲಯ ಮಹಿಳೆಯರು ಉತ್ತಮ ಶಿಕ್ಷಣ ಕಲಿತು ಸ್ವಾವಲಂಬಿಗಳಾಗಬೇಕು, ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಿವಿಯಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಸ್ತು ಸಂಗ್ರಹಾಲಯ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಕಲೆ, ಸಾಹಿತ್ಯ ಜನಪದ ಸೇರಿದಂತೆ ಇತರ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ವಿಜಯಪುರ ನಗರದ ಹೊರ ಭಾಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಇದೀಗ 20 ವರ್ಷ. ಇನ್ನು ಶೈಕ್ಷಣಿಕ ಚಟುವಟಿಕೆಗಳ ಸಹಿತ ಇತರ ಪಠ್ಯೇತರ ಚಟುವಟಿಕೆಗಳನ್ನು ಮಾಡುವಲ್ಲಿ ಮಹಿಳಾ ವಿವಿ ಹೆಸರು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ ರಾಜ್ಯದ ಇತರ ಜಿಲ್ಲೆಗಳ ಪದ್ದತಿ, ಕಲೆ, ಸಂಸ್ಕೃತಿ, ಜಾನಪದ ಸೇರಿದಂತೆ ಇತರ ವಿಷಯಗಳು ಎಲ್ಲವನ್ನು ತಿಳಿಸುವ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ.
7 ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಾಣದ ಮ್ಯೂಸಿಯಂ: ಕಳೆದ 7 ವರ್ಷಗಳ ಹಿಂದೆ ಅಂದಿನ ಕುಲಪತಿ ಮೀನಾ ಚಂದಾವಕರ ನೇತೃತ್ವದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಕಲೆ, ವಸ್ತುಗಳು, ವಿವಿಧ ಪರಿಕರಗಳು, ಉಡುಪುಗಳು, ಸಂಪ್ರದಾಯ ಬಿಂಬಿಸುವ ವಸ್ತುಗಳು, ಕೃಷಿ, ಗೃಹ ಬಳಕೆ ಸೇರಿದಂತೆ ಇತರ ತರಹೇವಾರಿ ವಸ್ತುಗಳನ್ನು ಮಹಿಳಾ ವಿವಿಯ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಆದರೆ 7 ವರ್ಷಗಳಾದರೂ ವಸ್ತು ಸಂಗ್ರಹಾಲಯ ಮಾತ್ರ ಉದ್ಘಾಟನೆಯಾಗಿಲ್ಲ. ಇದು ಇಲ್ಲಿನ ವಿದ್ಯಾರ್ಥಿನಿಯರಿಗೆ ನಿರಾಸೆ ಮೂಡಿಸಿದೆ.
ಅನುದಾನದ ಕೊರತೆ: ಈ ಕುರಿತು ವಿವಿಯ ಕುಲಪತಿ ಪ್ರೊ.ತುಳಸಿಮಾಲಾ ಪ್ರತಿಕ್ರಿಯಿದ್ದಾರೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದೇ ಹಿಂದಿನ ಕುಲಪತಿಗಳ ನೇತೃತ್ವದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಸದ್ಯ ಇದನ್ನು ಉದ್ಘಾಟನೆ ಮಾಡಬೇಕಿದೆ. ವಸ್ತು ಸಂಗ್ರಹಾಲಯದ ಕೆಲ ಕಾಮಗಾರಿಗಳು ಪೂರ್ಣವಾಗಿಲ್ಲ. ಕಾಮಗಾರಿ ಪೂರ್ಣಗೊಳ್ಳಬೇಕಾದರೆ, ಅಂದಾಜು ಮೂರ್ನಾಲ್ಕು ಕೋಟಿಯಷ್ಟು ಅನುದಾನ ಬೇಕಿದೆ. ಈ ಬಗ್ಗೆ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಅನುದಾನ ಸಿಕ್ಕಿಲ್ಲ. ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಅನುದಾನ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗಿರುತ್ತದೆ. ಮಹಿಳಾ ಮ್ಯೂಸಿಯಂ ನಿರ್ಮಾಣವಾದರೆ ರಾಜ್ಯದ ಎಲ್ಲ ಜಿಲ್ಲೆಗಳ ಕಲೆ ಸಂಸ್ಕೃತಿ ಒಂದೇ ಸೂರಿನಡಿ ವೀಕ್ಷಿಸಲು ವಿದ್ಯಾರ್ಥಿನೀಯರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ವಸ್ತು ಸಂಗ್ರಹಾಲಯಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಬದಲು ಅದನ್ನೇ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಬೇಕಿತ್ತು ಎಂಬ ಮಾತುಗಳೂ ಸಹ ಕೇಳಿ ಬಂದಿವೆ. ಈ ಮಧ್ಯೆ ಈಗಾಗಲೇ 6 ಕೋಟಿ ರೂಪಾಯಿಗಳನ್ನು ವಸ್ತು ಸಂಗ್ರಹಾಲಯಕ್ಕೆ ಖರ್ಚು ಮಾಡಲಾಗಿದೆ. ಇದು ಉದ್ಘಾಟನೆಯಾಗಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೆಕು ಎಂಬುವುದು ಇಲ್ಲಿನ ವಿದ್ಯಾರ್ಥಿಗಳ ಆಗ್ರಹ
ಇದನ್ನೂ ಓದಿ: ಯಾವುದೇ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ: ವಿಜಯಪುರ ಮಹಿಳಾ ವಿವಿ ಪ್ರಕಟಣೆ