ವಿಜಯಪುರ: ಅಭಿವೃದ್ಧಿ ಕಾರ್ಯಗಳಿಗೆ ಅಡತಡೆ ಉಂಟಾದ ಕಾರಣ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ಅಂಗಡಿಗಳನ್ನು ಇಂದು ಬೆಳಗ್ಗೆನಿಂದ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ತೆರವುಗೊಳಿಸಲಾಗುತ್ತಿದೆ. ಈ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮಾರುಕಟ್ಟೆ ಬೀದಿಬದಿ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾರುಕಟ್ಟೆಯಲ್ಲಿ ಸುಮಾರು 400ಕ್ಕೂ ಅಧಿಕ ಕುಟುಂಬಗಳು ತರಕಾರಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿವೆ. ಪಾಲಿಕೆ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡುತ್ತಿರೋದ್ರಿಂದ ನಮ್ಮ ಬದುಕು ಬೀದಿ ಬಂದಿದೆ ಎಂದು ವ್ಯಾಪಾರಸ್ಥ ಮಹಿಳೆಯರು ಕಣ್ಣೀರು ಹಾಕುತ್ತಿದ್ದರು.
ಘಟನಾ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ನಾವು ಮಾರುಕಟ್ಟೆಯನ್ನು ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಶಾಸ್ತ್ರಿ ಮಾರುಕಟ್ಟೆಯಲ್ಲಿ ಈಗಾಗಲೇ ಅಂಗಡಿಯನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ. ಪುನಃ ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದ್ರು. ವ್ಯಾಪಾರಸ್ಥರ ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ರು.