ವಿಜಯಪುರ : ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸಿಂದಗಿಯ ಜ್ಞಾನ ಭಾರತಿ ಪಿಯು ಕಾಲೇಜ್ ವಿದ್ಯಾರ್ಥಿ ಶೇ.97.66 ಅಂಕ ಗಳಿಸಿ ಸಾಧನೆ ಮೆರೆದಿದ್ದಾನೆ.
ಒಟ್ಟು 586 ಅಂಕ ಗಳಿಸಿದ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ ಜಿಲ್ಲೆಗೆ ಕಲಾ ವಿಭಾಗದಲ್ಲಿ ಮೊದಲು ಸ್ಥಾನಗಳಿಸಿದ್ದಾನೆ. ಕನ್ನಡ-100, ಹಿಂದಿ-98, ಇತಿಹಾಸ-98, ಸಮಾಜಶಾಸ್ತ್ರ-97, ರಾಜ್ಯಶಾಸ್ತ್ರ-93, ಶಿಕ್ಷಣಶಾಸ್ತ್ರ-100 ಅಂಕ ಗಳಿಸಿದ್ದು, ಈತನ ಸಾಧನೆಗೆ ಕಾಲೇಜ್ ಸಿಬ್ಬಂದಿ ವರ್ಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶೇ.54.22ರಷ್ಟು ಫಲಿತಾಂಶ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ವಿಜಯಪುರ ಕೊನೆ ಸ್ಥಾನ ಪಡೆದುಕೊಂಡು ನಿರಾಸೆ ಮೂಡಿಸಿದೆ. ಕಳೆದ ವರ್ಷ ಶೇ.68.55ರಷ್ಟು ಫಲಿತಾಂಶ ದಾಖಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 23607 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಕೇವಲ 12799 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಶೇ.54.22 ವಿದ್ಯಾರ್ಥಿಗಳು ಪಾಸ್ ಆಗಿರುವ ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ 12006 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 5189 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.43.22 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 4264 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2613 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ. 61.28 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 7337 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 4997 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.68.11 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.