ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿರುವ ಕುರಿತು ಸೂಕ್ತ ಪರಿಹಾರ ದೊರಕಿಸುವುದನ್ನು ಮರೆತು ಬೇಜವಾಬ್ದಾರಿಯಿಂದ ಇರುವುದು ಸರಿಯಲ್ಲ ಎಂದು ಶಾಸಕ ಎಂ.ಬಿ.ಪಾಟೀಲ್ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಸರಿಯಾದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ರೈತರಿಗೆ ಬೇಕಾಗಿರುವ ಟ್ರಾನ್ಸ್ ಫಾರ್ಮ್‌ಗಳನ್ನು ವಿತರಿಸಲು ವಿಳಂಬ ಮಾಡುತ್ತಿದ್ದೀರಿ ಎಂಬ ದೂರು ಕೇಳಿ ಬಂದಿದ್ದು, ಹೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಅರಿಯದೇ ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ಅಧಿಕಾರಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ ಎಂದು ಗುಡುಗಿದರು.
ಕೃಷಿ ಇಲಾಖೆಯಲ್ಲಿ ಈವರೆಗೆ ವಿಜಯಪುರ, ಬಬಲೇಶ್ವರ ಹಾಗೂ ತಿಕೋಟಾ ಈ ಮೂರು ತಾಲೂಕುಗಳಿಗೆ ಒಟ್ಟು 1,600 ಟನ್ ತೊಗರಿ, ಕಡಲೆ ಬಿತ್ತನೆ ಬೀಜ ಬೇಕಾಗಿದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ 900 ಟನ್ ರೈತರಿಗೆ ಹಂಚಿಕೆ ಮಾಡಲಾಗಿದೆ. ಇನ್ನು 700 ಟನ್ ಬಿತ್ತನೆ ಬೀಜ ಬೇಕಾಗುತ್ತದೆ. ಆದ್ದರಿಂದ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಿ. ಬೀಜದ ಪ್ರಮಾಣ ಕಡಿಮೆ ಬಿದ್ದರೆ ನಾನು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚಿನ ಬೀಜಗಳನ್ನು ಒದಗಿಸುತ್ತೇನೆ ಎಂದು ಹೇಳಿದರು.
ಕೊರೊನಾ ಸೋಂಕಿತರು ಇರುವ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಸದ್ಯ ಮಂಜೂರಾಗಿರುವ ಕಾಮಗಾರಿಗಳನ್ನು ಗುಣಮಟ್ಟದ ಜೊತೆ ತ್ವರಿತ ಗತಿಯಲ್ಲಿ ಸಂಪೂರ್ಣಗೊಳಿಸಬೇಕು. ಹಾಗೂ ಕೆರೆ, ಕಾಲುವೆಗಳಲ್ಲಿನ ನೀರು ದುರ್ಬಳಕೆಯಾಗುವುದನ್ನು ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಕೆರೆಯ ಬದಿಯಲ್ಲಿ ಖಾಲಿ ಜಾಗಗಳನ್ನು ಗುರುತಿಸಿ ಸಸಿ ನೆಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಎಸ್. ಭೂಸಗೊಂಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಬಿ.ಪಡಸಲಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಎಸ್.ಗಂಗನಳ್ಳಿ, ಹೆಸ್ಕಾಂ ಎಇಇ ಮಿಲಿಂದ ಜೀರ, ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಕೇಂದ್ರ ಕೊಲ್ಹಾರ್ ಕಾರ್ಯನಿರ್ವಾಹಕ ಅಭಿಯಂತರ ಎಸ್.ಟಿ. ಬಬಲೇಶ್ವರ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಎಸ್.ಎ. ಜಮಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಹತ್ತಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.