ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 2024ರ ಜನವರಿ 9ರಂದು ಚುನಾವಣೆ ನಿಗದಿಪಡಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ವಾರ್ಡ್ ಮರುವಿಂಗಡಣೆ, ಮೇಯರ್, ಉಪ ಮೇಯರ್ ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಕಲಬುರಗಿ ಹೈಕೋರ್ಟ್ ಪೀಠಕ್ಕೆ ಕೆಲ ಸದಸ್ಯರು ಅರ್ಜಿ ಸಲ್ಲಿಸಿದ್ದ ಕಾರಣ ಚುನಾವಣೆಗೆ ತಡೆ ಬಿದ್ದಿತ್ತು. ಕಳೆದ ಅಕ್ಟೋಬರ್ 30ರಂದು ನಡೆಯಬೇಕಿದ್ದ ಚುನಾವಣೆಗೂ ಹೈಕೋರ್ಟ್ ತಡೆ ನೀಡಿತ್ತು. ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೀಸಲಾತಿ ವಿಚಾರದಲ್ಲಿ ಕೆಲ ಸದಸ್ಯರು ಅರ್ಜಿ ಸಲ್ಲಿಸಿದ್ದರಿಂದ ಅದಕ್ಕೂ ತಡೆ ನೀಡಲಾಗಿತ್ತು. ಇದೀಗ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡು ಚುನಾವಣೆ ನಡೆಸಲು ಅನುಮತಿ ಸಿಕ್ಕಿದೆ.
2024ರ ಜನವರಿ 9ರಂದು ಚುನಾವಣೆ ನಡೆಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಆಧಿಸೂಚನೆ ಹೊರಡಿಸಲಾಗಿದೆ. 2022ರಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದರೂ ಮೇಯರ್, ಉಪ ಮೇಯರ್ ಚುನಾವಣೆ ನಡೆದಿರಲಿಲ್ಲ. 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ, 10 ಸ್ಥಾನಗಳಲ್ಲಿ ಕಾಂಗ್ರೆಸ್, 5 ಸ್ಥಾನಗಳಲ್ಲಿ ಪಕ್ಷೇತರರು, 2 ಸ್ಥಾನಗಳಲ್ಲಿ ಎಐಎಂಐಎಂ ಹಾಗೂ 1 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದರು. ಸದ್ಯ ಬಿಜೆಪಿ ಕಾಂಗ್ರೆಸ್ ಮಧ್ಯೆ ಪಾಲಿಕೆ ಅಧಿಕಾರದ ಚುಕ್ಕಾಣಿಗಾಗಿ ಹೋರಾಟ ನಡೆಯುತ್ತಿದೆ. ಪಕ್ಷೇತರರು ಎಐಎಂಐಎಂ, ಜೆಡಿಎಸ್ ಸದಸ್ಯರ ಬೆಂಬಲದಿಂದ ಆಧಿಕಾರ ಹಿಡಿಯಲು ಕಾಂಗ್ರೆಸ್ ಮುಂದಾಗಿದೆ.
ಇದನ್ನೂ ಓದಿ: 'ಪ್ರತಿಭಟನೆಯ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ'