ವಿಜಯಪುರ: ಕೋವಿಡ್ ಹಿನ್ನೆಲೆಯಲ್ಲಿ ವಿವಿಧ ಕಾರ್ಖಾನೆಗಳ ಮಾಲೀಕರು ಮತ್ತು ಕಾರ್ಮಿಕರು ಪರಸ್ಪರ ಸೌಹಾರ್ದಯುತವಾಗಿ ಇರಬೇಕು. ಜೊತೆಗೆ ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ನೆರವಾಗುವಂತೆ ರಾಜ್ಯ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮನವಿ ಮಾಡಿದ್ದಾರೆ.
ಕೋವಿಡ್ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಸಂಕಷ್ಟ ಅನುಭವಿಸಿದ್ದು, ಕಾರ್ಮಿಕರ ಹಿತ ಕಾಪಾಡಲು ಶಕ್ತಿಮೀರಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರು ಸೌಹಾರ್ದಯುತವಾಗಿ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಭಿವೃದ್ಧಿಯಲ್ಲಿ ನೆರವಾಗುವಂತೆ ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ವಿವಿಧ ಕಾರ್ಖಾನೆಗಳ ಮಾಲೀಕರು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಹಾಗೂ ರೈತರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಕಾರ್ಖಾನೆಗಳು ಮತ್ತು ಕಾರ್ಮಿಕರ ರಕ್ಷಣೆಗೆ ಸಕಾಲದಲ್ಲಿ ಸ್ಪಂದಿಸಿದೆ. ಮುಂದೆಯೂ ಕೂಡ ಕಾರ್ಖಾನೆಗಳು ಬದುಕಬೇಕು ಮತ್ತು ಕಾರ್ಮಿಕರಿಗೆ ಉದ್ಯೋಗದ ರಕ್ಷಣೆ ದೊರಕಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕೇರಳ, ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ನೂತನ ಮಂಡಳಿ ರಚನೆಯ ಅಂತಿಮ ಸಿದ್ದತೆ ನಡೆದಿದ್ದು, ವಿಧಾನಸಭೆ ಅಧಿವೇಶನದಲ್ಲಿ ನೂತನ ಬಿಲ್ ಮಂಡನೆಗೆ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಅದರಂತೆ ಸಕ್ಕರೆ ಕಾರ್ಖಾನೆಗಳ ಮೊಲ್ಯಾಸಿಸ್, ಎಥೆನಾಲ್ ಹಾಗೂ ಅಬಕಾರಿ ಸುಂಕಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು, ಆಯಾ ಇಲಾಖೆಗಳ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.