ವಿಜಯಪುರ : ಭೀಮಾತೀರದ ನಟೋರಿಯಸ್ ಗ್ಯಾಂಗ್ಸ್ಟರ್ ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಮಹಾದೇವ ಸಾಹುಕಾರ ಭೈರಗೊಂಡ ಸೇರಿ ಎಲ್ಲಾ 16 ಆರೋಪಿಗಳು ಇಂದು ಪೊಲೀಸ್ ಬಿಗಿಭದ್ರತೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
2017ರ ಅಕ್ಟೋಬರ್ 30ರಂದು ಚಡಚಣ ಹೊರ ಭಾಗದಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಧರ್ಮರಾಜ್ ಚಡಚಣ ಹತನಾಗಿದ್ದ. ಇದೊಂದು ನಕಲಿ ಎನ್ಕೌಂಟರ್ ಆಗಿತ್ತು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಧರ್ಮರಾಜ್ ಚಡಚಣ ಬದ್ಧವೈರಿ ಮಹಾದೇವ ಸಾಹುಕಾರ ಭೈರಗೊಂಡ, ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಸದ್ಯ ಇದರಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದು, ಉಳಿದ 16 ಜನ ಆರೋಪಿಗಳನ್ನು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜೂನ್ 8ರಂದು ಮತ್ತೆ ವಿಚಾರಣೆ ನಡೆಸಲು ದಿನಾಂಕ ಮುಂದೂಡಿದರು.
ಬಿಗಿ ಬಂದೋಬಸ್ತ್ : ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಹಾದೇವ ಸಾಹುಕಾರ ಮೇಲೆ ವಿಜಯಪುರ ಹೊರವಲಯದಲ್ಲಿ ಒಂದು ಬಾರಿ ಗುಂಡಿನ ದಾಳಿ ನಡೆಸಲಾಗಿತ್ತು. ಹೀಗಾಗಿ, ಆರೋಪಿಗಳ ಭದ್ರತೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿ ಫೈಲ್ಸ್ ಎಂದು ವಿವಾದಾತ್ಮಕ ಪೋಸ್ಟ್.. ಸಂಜಯ್ ರಾವತ್ ಟ್ವೀಟ್ ವಿರುದ್ಧ ಭುಗಿಲೆದ್ದ ಆಕ್ರೋಶ!