ವಿಜಯಪುರ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಅನ್ನದಾತ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾನೆ. ಕಳೆದ ಬಾರಿಯಂತೆ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು, ಶೇ. 70ರಷ್ಟು ರೈತರು ತೊಗರಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತಕ ವರ್ಷ 6.99 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುವ ಸಾಧ್ಯತೆಯಿದೆ. ಇದರಲ್ಲಿ 4.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ತೊಗರಿ ಬೆಳೆ ರೈತನ ಕೈ ಹಿಡಿದಿತ್ತು. ಹೀಗಾಗಿ, ರೈತರು ಈ ಬಾರಿ ಕೂಡ ತೊಗರಿ ಬೆಳೆಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಜೊತೆ ಮುಸುಕಿನ ಜೋಳ, ಸಜ್ಜೆ, ಶೇಂಗಾ ಉಪ ಬೆಳೆಯಾಗಿ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.
ರೈತರ ಅಗತ್ಯಕ್ಕೆ ಅನುಗುಣವಾಗಿ ಕೃಷಿ ಇಲಾಖೆ ಬೀಜ, ಗೊಬ್ಬರ ಮತ್ತು ಕೃಷಿ ಉಪಕರಣಗಳನ್ನು ವಿತರಣೆ ಮಾಡುತ್ತಿದೆ. ಬೀಜ, ಗೊಬ್ಬರ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಮಾಡಲಾಗಿದೆ. ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡದಂತೆ ಮಾರಾಟಗಾರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ನಿಗದಿ ಮಾಡಿದ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ವಿತರಿಸಲು ಕೃಷಿ ಇಲಾಖೆ ಪ್ರತಿ ತಾಲೂಕಿನಲ್ಲಿ ವ್ಯವಸ್ಥೆ ಮಾಡಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುಮಾರು 56 ಮಿ.ಮೀ. ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದ ಅನ್ನದಾತನ ಮೊಗದಲ್ಲಿ ಹೊಸ ಹುಮ್ಮಸ್ಸು ಮೂಡಿದೆ.