ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆ ಹಿನ್ನೆಲೆಯಲ್ಲಿ ಭೀಮಾ ನದಿ ಭೋರ್ಗರೆಯುತ್ತಿದೆ. ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಹಿಂಗಣಿ ಬ್ಯಾರೇಜ್ ಜಲಾವೃತವಾಗಿದೆ. ಈ ಬ್ಯಾರೇಜ್ಗೆ ಹೊಂದಿಕೊಂಡಿರುವ ಹಲಸಂಗಿ ಗ್ರಾಮಕ್ಕೆ ನೀರು ನುಗ್ಗಿದೆ.
ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಹಲಸಂಗಿ ಗ್ರಾಮದ ಜನರನ್ನ ಸ್ಥಳಾಂತರಗೊಳಿಸಲಾಗಿತ್ತು. ಹಳೆಯ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, ಅದರಲ್ಲಿ 50ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಈ ಮನೆಗಳಲ್ಲಿ ಸಿಲುಕಿಕೊಂಡಿದ್ದ ಹಲವರನ್ನ ಜಿಲ್ಲಾಡಳಿತ ರಕ್ಷಣೆ ಮಾಡಿದೆ.
ಸೊನ್ನ ಬ್ಯಾರೇಜ್ ನ ಹಿನ್ನೀರಿನಿಂದ ಈ ಗ್ರಾಮ ಜಲಾವೃತವಾಗಿದೆ. ಗ್ರಾಮದಲ್ಲಿದ್ದ ಜನ ಜಾನುವಾರುಗಳನ್ನು ಸಹ ಸ್ಥಳಾಂತರ ಮಾಡಲಾಗಿದೆ. ಆಲಮೇಲ ತಾಲೂಕಿನ ದೇವಣಗಾಂವ್, ಶಂಬೇವಾಡ, ಕುಮಸಗಿ ಗ್ರಾಮದಲ್ಲಿಯೂ ಸಹ ಮನೆಗಳಿಗೆ ನೀರು ನುಗ್ಗಿದೆ. ಸುಮಾರು 25 ಮನೆಗಳು ಜಲಾವೃತವಾಗಿವೆ. ಇದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ನೀರು ನುಗ್ಗಿದೆ. ತಕ್ಷಣ ಜಿಲ್ಲಾಡಳಿತ ಈ ಭಾಗದಲ್ಲಿ ತುರ್ತು ಪರಿಹಾರ ಕಾಮಗಾರಿ ಮತ್ತು ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಶೇಷ ಪ್ಯಾಕೇಜ್ ಗೆ ಒತ್ತಾಯ: ಭೀಮಾ ತೀರದಲ್ಲಿ ಪ್ರವಾಹ ಹಿನ್ನೆಲೆ ಜೆಡಿಎಸ್ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮಾತನಾಡಿದ್ದು, ಈ ಭಾಗದ ಗ್ರಾಮಸ್ಥರ ಸಮಸ್ಯೆ ನೀಗಿಸಲು ತಕ್ಷಣ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಭೀಮಾ ತೀರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಮುಂದೆ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಲಿವೆ. ಬರಗಾಲದಿಂದ ಜನತೆ ನೋವು ಅನುಭವಿಸಿದ್ದಾರೆ. ಪ್ರವಾಹದಿಂದಲೂ ನಲುಗಿದ್ದಾರೆ. ಮಹಾರಾಷ್ಟ್ರದಿಂದ 3.25 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಹೀಗಾಗಿ ಮತ್ತೆ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತ, ತಾಲೂಕಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಸ ಮಾಡಿವೆ. ನದಿ ತೀರದ ಜನತೆ ಸಹ ಸುರಕ್ಷಿತ ಸ್ಥಳಗಳಿಗೆ ತೆರಳಿ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ , 00.77 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ವಿಜಯಪುರ ತಾಲೂಕು 0.4, ಬಬಲೇಶ್ವರ 03.0 ತಿಕೋಟಾ 2.2, ಮುದ್ದೇಬಿಹಾಳ 28.65, ತಾಳಿಕೋಟೆ 24, ಇಂಡಿ 01.25, ಚಡಚಣ 01.25, ಸಿಂದಗಿ 01.15 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ದೇವರಹಿಪ್ಪರಗಿ, ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ,ತಾಳಿಕೋಟೆ ತಾಲೂಕಿನಲ್ಲಿ ಮಳೆಯಾಗಿಲ್ಲ.