ವಿಜಯಪುರ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಸಂಪೂರ್ಣ ಹತೋಟಿಗೆ ಬರುವ ಸಿಹಿಸುದ್ದಿಯನ್ನು ಶೀಘ್ರ ನೀಡುವುದಾಗಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಹೊಸ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತನಿಖೆ ಚುರುಕಾಗಿ ನಡೆಯುತ್ತಿದೆ. ಬೆಂಗಳೂರು ನಗರ ಹಾಗೂ ರಾಜ್ಯದ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತನಿಖೆ ಸರಿಯಾದ ದಾರಿಯಲ್ಲಿ ಹೋಗುತ್ತಿದೆ ಎಂದರು.
ವಿಜಯಪುರ ಗಡಿಭಾಗದಲ್ಲಿ ಮಾದಕ ದ್ರವ್ಯಗಳು ಎಗ್ಗಿಲ್ಲದೆ ಗಡಿ ದಾಟುತ್ತಿರುವ ಮಾಹಿತಿ ಇದೆ. ಕರ್ನಾಟಕ-ಮಹಾರಾಷ್ಟ್ರ ಹಾಗೂ ಕರ್ನಾಟಕ-ಆಂಧ್ರಪ್ರದೇಶಗಳಿಂದ ಮಾದಕ ದ್ರವ್ಯ ಮಾರಾಟ ನಡೆಯುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.
ಸದ್ಯ ವಲಯ ಮಟ್ಟದ ಐಜಿಪಿಗಳಿಗೆ ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಲಾಗಿದೆ. ಶೀಘ್ರ ಮಾದಕ ದ್ರವ್ಯ ಜಾಲವನ್ನು ರಾಜ್ಯ ಪೊಲೀಸರು ಭೇದಿಸಲಿದ್ದಾರೆ. ಈ ಸಂತೋಷ ಸುದ್ದಿ ಬೇಗ ನೀಡುವುದಾಗಿ ಸುಳಿವು ನೀಡಿದರು. ಸ್ಯಾಂಡಲ್ ವುಡ್ ನಂಟಿನ ಕುರಿತು ಡಿಜಿಪಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.