ವಿಜಯಪುರ : ಈ ದೇವರಿಗೆ ಮದ್ಯವೇ ನೈವೇದ್ಯ. ಮದ್ಯದ ಪ್ಯಾಕೇಟ್, ಬಾಟಲಿಯೇ ಹರಕೆ ರೂಪದಲ್ಲಿ ಸರ್ಮಪಿಸಲಾಗುತ್ತದೆ. ಅಲ್ಲದೆ, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಇದೇ ತೀರ್ಥ. ವಿಜಯಪುರ ಜಿಲ್ಲೆಯ ಬಬಲಾದಿ ಗ್ರಾಮದ ಆರಾಧ್ಯ ದೈವ ಸದಾಶಿವ ಮುತ್ಯಾರ ದೇವಾಸ್ಥಾನದಲ್ಲಿ ಇಂತಹ ವಿಲಕ್ಷಣ ಆಚರಣೆ ನಡೆಯುತ್ತೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಆರಾಧ್ಯ ದೈವ್ಯ ಸದಾಶಿವ ಮುತ್ಯಾ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಇಂತಹ ವಿಚಿತ್ರ ಹಾಗೂ ಸೂಜಿಗದ ಆಚರಣೆ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಿಂದ ಮೂರು ದಿನಗಳ ಕಾಲ ಬಹುದೊಡ್ಡ ಜಾತ್ರೆ ನಡೆಯುತ್ತೆ. ಮಹಾರಾಷ್ಟ್ರ, ಗೋವಾ ಸೇರಿ ಸುತ್ತಮುತ್ತಲಿನ ಜಿಲ್ಲೆಯ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸದಾಶಿವ ಮುತ್ಯಾನ ಗದ್ದುಗೆ ಪೂಜೆ ಹಾಗೂ ಅಲ್ಲಿ ಪ್ರತಿಷ್ಠಾಪಿಸಿದ ದೇವರ ದರ್ಶನಕ್ಕೆ ಬರುವ ಭಕ್ತರು ಕೈಯಲ್ಲಿ ಮದ್ಯದ ಪ್ಯಾಕೇಟ್, ಬಾಟಲಿಗಳನ್ನು ಹಿಡಿದುಕೊಂಡು ಪ್ರತಿ ದೇವರ ಮೂರ್ತಿಗಳ ಮೇಲೆ ಮದ್ಯ ಚೆಲ್ಲುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.
ಮಠದ ಜಾತ್ರೆಗೆ ಆಗಮಿಸುವ ಭಕ್ತರು ಮಠದ ಬಯಲು ಜಾಗದಲ್ಲಿ ಹರಕೆ ಹೊತ್ತವರು ಮಾಂಸದ ಅಡುಗೆ ಮಾಡಿ ದೇವರಿಗೆ ಅರ್ಪಿಸಿ, ನಂತರ ಕುಟುಂಬ ಸಮೇತ ಊಟ ಮಾಡಿ ತಮ್ಮ ಗ್ರಾಮದತ್ತ ಮರಳುತ್ತಾರೆ. ಕಳೆದ 28 ವರ್ಷಗಳ ನಂತರ ಮಠದ ಜಾತ್ರೆಗೆ ಅತಿ ಹೆಚ್ಚು ಭಕ್ತರು ಆಗಮಿಸಿದ್ದು, ಜಾತ್ರೆ ಕಳೆಗಟ್ಟಿದಂತಾಗಿತ್ತು.
ಶ್ರೀಮಠವು 500 ವರ್ಷಗಳಷ್ಟು ಹಿಂದಿನ ಇತಿಹಾಸ ಹೊಂದಿದೆ. ಮೂಲಗುರು ಸದಾಶಿವ ಮುತ್ಯಾ ಬಾಳಿ ಹೋಗಿದ್ದಾರೆ. ಮಠದಲ್ಲಿ ವರ್ಷವಿಡೀ ಅಮಲಿನ ದಾಸೋಹ ನಡೆಯುತ್ತದೆ. ಮಠದ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಶಕ್ತಿಗನುಸಾರವಾಗಿ ದವಸ ಧಾನ್ಯ ನೀಡುತ್ತಾ ಬಂದಿದ್ದಾರೆ. ಮಠದ ದರ್ಶನಕ್ಕೆ ಬರುವ ಭಕ್ತರು ಪ್ರಸಾದದ ರೂಪದಲ್ಲಿ ಅಮಲಿನಲ್ಲಿ ಸ್ವೀಕರಿಸುತ್ತಾರೆ.
ಪ್ರತಿ ವರ್ಷ ನಡೆಯುವ ಬಬಲಾದ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯ ಸುರಿಯುವುದು, ಅದನ್ನು ತೀರ್ಥ ರೂಪದಲ್ಲಿ ಸ್ವೀಕರಿಸುವುದು ಕಡ್ಡಾಯವಲ್ಲ. ಆದರೆ, ಹಲವು ವರ್ಷಗಳಿಂದ ನಡೆದುಕೊಂಡು ಬರುವ ಸಂಪ್ರದಾಯ ಮುರಿಯುವ ಗೋಜಿಗೆ ಭಕ್ತರಾಗಲಿ, ಮಠದ ಆಡಳಿತ ಮಂಡಳಿಯಾಗಲಿ ಹೋಗಿಲ್ಲ.
ಹೀಗಾಗಿ ಬಬಲಾದ ಜಾತ್ರೆ ಎಲ್ಲಡೆ ಪ್ರಸಿದ್ದಿ ಪಡೆದಿದೆ. ಈ ವರ್ಷ ಕೊರೊನಾ ಹಾವಳಿ ಇದ್ದರೂ, ಜಾತ್ರೆಗೆ ಬಂದ ಭಕ್ತರಲ್ಲಿ ಆ ಯಾವುದೇ ಭೀತಿ ಇರಲಿಲ್ಲ. ನೂಕುನುಗ್ಗಲಿನಲ್ಲಿಯೇ ದೇವರ ದರ್ಶನ ಪಡೆದು ಮದ್ಯವನ್ನು ಸಮರ್ಪಿಸಿ, ಅದನ್ನೇ ತೀರ್ಥ ರೂಪದಲ್ಲಿ ಸ್ವೀಕರಿಸಿ ಕೃತಾರ್ಥರಾದರು.