ವಿಜಯಪುರ: ವಿವಾಹೇತರ ಸಂಬಂಧದ ಅನುಮಾನದಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಸಾಕ್ಷ್ಯ ನಾಶಕ್ಕಾಗಿ ಮೃತದೇಹವನ್ನು ಕೃಷ್ಣಾ ನದಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.
ಬಂಧಿತರನ್ನು ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ವಿರೇಶ ಮಲ್ಲಣ್ಣ ಮಡಿವಾಳರ, ಮಡಿವಾಳಪ್ಪ ಮಲ್ಲಣ್ಣ ಮಡಿವಾಳರ ಹಾಗೂ ಕಾಶಿನಾಥ ತಮ್ಮಣ್ಣ ಮಡಿವಾಳರ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ..
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಇಂಗಳಗಿ ಗ್ರಾಮದ ಮಹಿಳೆಯೊಬ್ಬಳು ತನ್ನ ಪತಿ ಯಮನಪ್ಪ ಮಡಿವಾಳನನ್ನು ಹಣ ಕೊಡುವುದಾಗಿ ಆಗಸ್ಟ್ 6ರಂದು ಬಳಗಾನೂರ ಗ್ರಾಮಕ್ಕೆ ಕರೆಯಿಸಿ ಗುತ್ತಿಹಾಳದ ತೋಟದಲ್ಲಿ ಪಾರ್ಟಿ ಮಾಡಿ ಕೊಲೆ ಮಾಡಿದ್ದಾರೆ ಎಂದು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಘಟನೆಗೆ ಕಾರಣ..
ಕೊಲೆ ಮಾಡಿದ ಪ್ರಮುಖ ಆರೋಪಿ ವೀರೇಶ ಮಡಿವಾಳರ ಪತ್ನಿ ಜತೆ ಕೊಲೆಯಾದ ಯಮನಪ್ಪ ಮಡಿವಾಳರ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಅನುಮಾನದ ಹಿನ್ನೆಲೆ ವಿರೇಶ ತನ್ನ ಇಬ್ಬರು ಸಹಚರರೊಂದಿಗೆ ಸಂಚು ರೂಪಿಸಿ ಇಂಗಳಗಿ ಗ್ರಾಮದಿಂದ ಯಮನಪ್ಪನನ್ನು ಬಳಗಾನೂರಕ್ಕೆ ಕರೆಯಿಸಿಕೊಂಡು ತೋಟದ ಮನೆಯಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಆತನನ್ನು ಕುಡಗೋಲದಿಂದ ಕೊಚ್ಚಿ ಕೊಲೆ ಮಾಡಿದ್ದರು.
ಅಲ್ಲದೆ ಸಾಕ್ಷಿ ನಾಶ ಪಡಿಸಲು ಮೃತ ದೇಹವನ್ನು ಮೊದಲು ಮಣ್ಣಿನಲ್ಲಿ ಮುಚ್ಚಿದ್ದರು. ಆದರೆ ಪೊಲೀಸರಿಗೆ ಗೊತ್ತಾಗಹುದೆಂದು ಶವವನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ ಮೇಲೆ ತೆರಳಿ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಹತ್ತಿರದ ಸೇತುವೆಯ ಮೇಲಿಂದ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.
ನದಿಯಲ್ಲಿ ಶವ ಸಿಕ್ಕ ಮೇಲೆ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳ ಸಮೇತ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಬಹುಮಾನ ಘೋಷಿಸಿದ್ದಾರೆ.