ಮುದ್ದೇಬಿಹಾಳ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 16 ನೇ ವಾರ್ಡ್ ಹಾಗೂ ಅದರ ಅಕ್ಕಪಕ್ಕದ ವಾರ್ಡಿನಲ್ಲಿ ಹೊರಪೇಟಿ ಗಲ್ಲಿ, ಜವಾಹರಲಾಲ್ ನೆಹರು ಶಾಲೆಯ ಹತ್ತಿರ ಕಸ ಸಂಗ್ರಹವಾಗಿದೆ. ಕಸ ಬಿದ್ದು ವಾರ ಕಳೆದರೂ ವಿಲೇವಾರಿಗೆ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಧೋರಣೆಗೆ ಬೇಸತ್ತ ವಾರ್ಡ್ ಸದಸ್ಯೆಯ ಪುತ್ರ ಇಂದು ತಮ್ಮ ಸ್ನೇಹಿತರೊಂದಿಗೆ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಪುರಸಭೆ ಸದಸ್ಯೆ ಚಾಂದಬಿ ಮಕಾನದಾರ ಮಾತನಾಡಿ, ಪಟ್ಟಣದ ಹೊರಪೇಟಿ ಗಲ್ಲಿಯಲ್ಲಿ ಬಿ.ಎಸ್.ಎನ್.ಎಲ್.ಕಚೇರಿಯ ಮುಂದೆ ಕಳೆದೊಂದು ವಾರದಿಂದ ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಕಸವನ್ನು ತಂದು ಹಾಕುತ್ತಿದ್ದಾರೆ. ಪುರಸಭೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿ ಕಳೆದೊಂದು ವಾರದಿಂದ ಇತ್ತ ಇಣುಕಿಯೂ ನೋಡಿಲ್ಲ ಎಂದು ಆರೋಪಿಸಿದ್ದಾರೆ.
ಪುರಸಭೆ ಸದಸ್ಯೆ ಪುತ್ರ ಅಬ್ದುಲ್‌ಮಜೀದ ಮಕಾನದಾರ ಮಾಧ್ಯಮದವರೊಂದಿಗೆ ಮಾತನಾಡಿ, ಹೊರಪೇಟಿ ಗಲ್ಲಿಯಲ್ಲಿ ಕಳೆದೊಂದು ವಾರದಿಂದ ಕೊಳಚೆ ಎಲ್ಲೆಂದರಲ್ಲಿ ಬಿದ್ದಿದ್ದು, ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಪುರಸಭೆ ಸದಸ್ಯರೇ ಕರೆ ಮಾಡಿದರೂ ಮುಖ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದ್ದಾರೆ.
ವಾರ್ಡ್ ನಿವಾಸಿಗಳಾದ ಆಸೀಫ್ ಡಮಣಿ, ಶಾಹೀದ್ ರಂದಾ, ತಿಪ್ಪಣ್ಣ ಶಹಾಪೂರ ತಾವೇ ಕಸ ಗುಡಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.