ವಿಜಯಪುರ : ಒಳ್ಳೆಯ ಮಂತ್ರಿಗಳನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲಹೆ ನೀಡಿದ್ದಾರೆ.
ಜಿಲ್ಲೆಯ ಕಾರ್ಯಕ್ರಮಯೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದರು. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ ಎಂದು ಮತ್ತೊಮ್ಮೆ ಬಿಎಸ್‌ವೈ ಅವರನ್ನು ಮಾತಿನಲ್ಲಿ ತಿವಿದರು.
ಅವರು ಹೇಳಿದ್ದೇ ಆಗೋದಿದ್ರೆ, ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ. ಬಿಎಸ್‌ವೈ ಅವರು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ಪ್ರಾಣ ಹೋದರೂ ಪರವಾಗಿಲ್ಲ. ಯತ್ನಾಳ್‌ನನ್ನು ಸಿಎಂ ಮಾಡಬಾರದು ಎಂದು ಬಿಎಸ್‌ವೈ ಕಂಡೀಷನ್ ಇತ್ತು. ಹಾಗಾಗಿ, ನಾನು ಸಿಎಂ ಆಗಿಲ್ಲ ಎಂದು ತಮ್ಮ ಹೇಳಿಕೆಗಳನ್ನು ಸಮರ್ಥಿಸಿದರು.
ಇಡೀ ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಉಳ್ಳವರಿಗೆ ಮಾಡಬೇಕು ಎಂದು ನನ್ನ ಆಗ್ರಹವಿದೆ. ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಗಂಭೀರ ಪರಿಣಾಮ ಆಗುತ್ತದೆ ಎಂದು ಎಚ್ಚರಿಸಿದರು.
ಹೋರಾಟಕ್ಕೆ ಹಿನ್ನಡೆ ಯಾರು?: ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ಹಾಗೂ ನಿರಾಣಿಗೆ ಹಿನ್ನಡೆ ಆಯ್ತಾ? ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗೂ ಇದಕ್ಕೂ ಸಂಬಂದವಿಲ್ಲ. ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದ್ರೆ, ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯತ್ನಾಳ್‌ನನ್ನು ಮುಗಿಸಬೇಕು ಎಂದು ಯಾವನೋ ಅನಾನುಭವಿಯನ್ನು ತಂದರೆ ಆಗುತ್ತಾ?. ನನಗೆ ಇರುವಂತಹ ಸಿನಿಯಾರಿಟಿ ಯಾರಿಗಾದರೂ ಬಿಜೆಪಿಯಲ್ಲಿ ಇದೆಯಾ?. ಅನಂತ್‌ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರಿದ್ದಾರೆ ಎಂದು ಪ್ರಶ್ನಿಸಿದರು. ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾದವನು. ಐದು ಬಾರಿ ಆರಿಸಿ ಬಂದವನು. ಯತ್ನಾಳ್ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರ ಅಪ್ರಸ್ತುತ ಎಂದರು.
ಏಕೆ ಯಡಿಯೂರಪ್ಪ ಹೋಗಿರಲಿಲ್ಲವಾ? ಬೊಮ್ಮಾಯಿ ಮೂಲ ಬಿಜೆಪಿಗರಾ? ಅಥವಾ ಆರ್ಎಸ್ಎಸ್ನಲ್ಲಿ ಧ್ವಜ ಪ್ರಣಾಮ ಮಾಡಿದ್ದಾರಾ?. ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದುತ್ವ ಉಳಿಯಬೇಕಾದರೆ, ನಿಷ್ಠಾವಂತರು ಉಳಿಯಬೇಕಾದರೆ ಪಕ್ಷ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯರ ಕಡೆಗಣನೆ : ದುರ್ದೈವವೆಂದರೆ ಮಠಾಧೀಶರನ್ನು ಹಿಡಿದು ಮಂತ್ರಿಯಾಗಬೇಕಾದ ಪರಿಸ್ಥಿತಿ ಹಿರಿಯ ನಾಯಕರಿಗೂ ಬಂದಿದೆ. ಇದು ದುರ್ದೈವದ ವಿಚಾರವಾಗಿದೆ ಎಂದರು. ಬಿಜೆಪಿಯಲ್ಲಿ ಹೈಕಮಾಂಡ್ ಇಲ್ಲವಾ? ಹಾಗಾದ್ರೆ, ಹೈಕಮಾಂಡ್ ಯಾಕೆ ಬೇಕು, ದೆಹಲಿಗೆ ಯಾಕೆ ಹೋಗಬೇಕು?. ಚಿತ್ರದುರ್ಗ ಸ್ವಾಮೀಜಿ ಸೇರಿದಂತೆ ಮಠಾಧೀಶರ ಬಳಿ ಹೋದರೆ ಸಾಕು. ದಿಂಗಾಲೇಶ್ವರ ಸ್ವಾಮೀಜಿ ಮಠದಲ್ಲಿ ಕುಳಿತು ಬಿಜೆಪಿ ನಾಶವಾಗ್ತದೆ ಎಂದು ಹೇಳ್ತಾರೆ, ಇದು ಎಷ್ಟು ಪ್ರಭಾವ ಇದೆ ಎಂದು ನೀವೇ ಊಹಿಸಿ ಎಂದರು.
ಸಮಾನ ನಾಗರಿಕತೆಗಾಗಿ, ಎರಡು ಮಕ್ಕಳು ಇದ್ದವರಿಗೆ ಸಬ್ಸಿಡಿ ಕೊಡುವ ಪರವಾಗಿ, ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಟ ಮಾಡಲಿ ಎಂದು ಸಲಹೆ ನೀಡಿದರು. ಕೆಲ ಮಠಾಧೀಶರೇ ಯಡಿಯೂರಪ್ಪನವರ ಚೇಲಾಗಳಾಗಿ ಕೆಲಸ ಮಾಡ್ತೀರಾ?. ಯಡಿಯೂರಪ್ಪ ಅವರ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ಪ್ಯಾಕೇಟ್ನಲ್ಲಿ ಹಾಕಿ ಕೊಟ್ಟರು.
ಅದರಲ್ಲಿ ಎರಡು ಸಾವಿರ ಒಬ್ಬ ಲೀಡರ್ ಕತ್ತರಿಸಿದ, ಇನ್ನೊಬ್ಬ ಸ್ವಾಮಿ ಅದನ್ನು ಹಂಚುತ್ತೇನೆ ಎಂದು ಎರಡು ಸಾವಿರ ಕತ್ತರಿಸಿದ, ಮಠಾಧೀಶರಿಗೆ ಹೋಗಿದ್ದು ಆರು ಸಾವಿರ ರೂಪಾಯಿ. ಕತ್ತರಿಸುವ ಕಂಪನಿಯೇ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಯಡಿಯೂರಪ್ಪ ಅವರ ಚಾಕರಿ ಮಾಡೋರು, ವಿಜಯೇಂದ್ರ ರಾತ್ರಿ ವ್ಯವಸ್ಥೆ ಮಾಡೋರು, ಬಿಜೆಪಿ ಕಟ್ಟದವರು ಇವತ್ತು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಇದೇ ರೀತಿ ಮುಂದುವರೆದರೆ ನಾವೇ ಕಾಂಗ್ರೆಸ್ಗೆ ತಾಂಬೂಲ ಕೊಟ್ಟು ಮುಖ್ಯಮಂತ್ರಿ ಆಗಬನ್ನಿ ಎನ್ನುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಎಂದರು.
ಓದಿ: ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸಿದಾಕ್ಷಣ BBMP ಬಾಧ್ಯತೆ ಮುಗಿಯದು: ಹೈಕೋರ್ಟ್