ವಿಜಯಪುರ : ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ನಾಯಕರ ಮಾತ್ರವಲ್ಲ ನಮ್ಮ ಬಿಜೆಪಿಯ ಒಬ್ಬ ಮುಖ್ಯಸ್ಥರ ಕೈವಾಡವೂ ಇದೆ. ಸಚಿವ ಈಶ್ವರಪ್ಪ ಅವರನ್ನು ಇದರಲ್ಲಿ ಬಲಿಪಶು ಮಾಡಲಾಗಿದೆ ಎಂಗು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ. ಸಮಯ ಬಂದಾಗ ಅವರ ಹೆಸರು ಬಹಿರಂಗಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯ ಒಬ್ಬರು ನಾಯಕರು ಇಂಥ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಸಿಡಿ ಮಾಡಿಸುವುದು, ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎರಡು ಕಾರ್ಖಾನೆಗಳಿವೆ. ಇದರ ನಾಯಕರು ಓರ್ವ ಬಿಜೆಪಿ ಇನ್ನೊಬ್ಬ ಕಾಂಗ್ರೆಸ್ನವರಾಗಿದ್ದಾರೆ. ಸಿಡಿ ಮಾಡುವುದು, ಎಡಿಟ್ ಮಾಡುವುದು ಅವರ ಕೆಲಸವಾಗಿದೆ. ಇಬ್ಬರು ಮಹಾನ್ ಕಳ್ಳರು, ಇದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಹಾನಾಯಕರ ಹೆಸರು ಬಹಿರಂಗವಾಗಲಿ : ಕರ್ನಾಟಕದಲ್ಲಿ ಸುಸಂಸ್ಕೃತ ರಾಜಕಾರಣ ಇದೆ. ಕೆಲವರಿಂದ ಇದು ಹಾಳಾಗುತ್ತಿದೆ. ರಾಜ್ಯದಲ್ಲಿ ದೇವರಾಜ ಅರಸು ಅವರಂತಹ ಎಂತೆಂಥ ರಾಜಕಾರಣಿಗಳು ಇದ್ದರು. ಆದರೆ, ಈಗ ಬ್ಲ್ಯಾಕ್ ಮೇಲ್ ಮಾಡುತ್ತಾ ರಾಜಕಾರಣ ನಡೆಯುತ್ತಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ ಹಾಗೆ ಸಿಡಿ ಹಗರಣ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಹಿಂದೆ ಒಂದೇ ತಂಡವಿದೆ. ಮಹಾನಾಯಕರೊಬ್ಬರ ಕೈವಾಡವಿದೆ. ಅವರ ಹೆಸರು ಬಹಿರಂಗವಾಗಬೇಕು ಎಂದರು.
ವರ್ಕ್ ಆರ್ಡರ್ ಆಗಿಲ್ಲ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಅವರಿಗೆ ಕಾಮಗಾರಿ ನಡೆಸಲು ಯಾವುದೇ ವರ್ಕ್ ಆರ್ಡರ್ ನೀಡಿಲ್ಲ, ಇಷ್ಟಾದರೂ 5 ಕೋಟಿ ರೂ.ಗಳ ಕಾಮಗಾರಿ ಹೇಗೆ ಮಾಡಿದರು. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರ ಅದು. ಅವರ ಗಮನಕ್ಕೆ ಬಾರದೆ 108 ಕಾಮಗಾರಿ ಹೇಗೆ ನಡೆದವು ಎನ್ನುವ ಹಲವು ಪ್ರಶ್ನೆ ಉದ್ಭವವಾಗಿವೆ. ಕಾಂಗ್ರೆಸ್ ನಾಯಕರನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ಹಿಂದೂ ಮುಖಂಡರ ಹತ್ಯೆಯಾದಾಗ ಬರದ ಕಾಂಗ್ರೆಸ್ ಮುಖಂಡರು ಗುತ್ತಿಗೆದಾರನ ಆತ್ಮಹತ್ಯೆಗೆ ದೌಡಾಯಿಸಿ ಬಂದಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ರಾಜಕೀಯ ಆರಂಭಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸಿದ್ದಗಂಗಾ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆಯಲಿರುವ ಸಚಿವ ಈಶ್ವರಪ್ಪ!