ವಿಜಯಪುರ: ಬೆಂಗಳೂರಿನಲ್ಲಿ ಯುವಕನ ಹತ್ಯೆ ವಿಚಾರವಾಗಿ ಗೃಹ ಸಚಿವರ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ಹಾಗೂ ನಂತರ ಹೇಳಿಕೆ ಬದಲಾವಣೆ ವಿಚಾರ ನೋಡಿದರೆ ಬಿಜೆಪಿ ಸರ್ಕಾರದ್ದು ಎಲ್ಲವೂ ಅತಿರೇಕವಾಗಿದೆ ಅನಿಸುತ್ತಿದೆ. ಮತಗಳ ಆಸೆ ಹಾಗೂ ಮತಗಳ ಕ್ರೋಢೀಕರಣಕ್ಕಾಗಿ ಇದನ್ನೆಲ್ಲ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಒಂದಾದ ಮೇಲೆ ಒಂದು ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಹಿಜಾಬ್, ಕಾಶ್ಮೀರಿ ಫೈಲ್ಸ್ ವಿಚಾರ, ದೇವಸ್ಥಾನ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ, ಹಲಾಲ್, ಆಜಾನ್ ವಿವಾದ ಮಾಡಲಾಗುತ್ತಿದೆ. ಇದು ಬಿಜೆಪಿಗೆ ತಿರುಗುಬಾಣವಾಗಲಿದೆ. ಇಂತಹ ವಿವಾದಗಳಿಂದಾಗಿ ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ಇಲ್ಲಿ ಬಂದು ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಸಮಸ್ಯೆಗಳನ್ನು ಮುಚ್ಚಿ ಹಾಕುವುದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಭ್ರಷ್ಟಾಚಾರವನ್ನು ಪ್ರಧಾನಿ ಕಂಡೂ ಕಾಣದಂತಿದ್ದಾರೆ. ಬೇರೆಯವರಾದರೆ ಸಿಬಿಐ ತನಿಖೆ ಮಾಡಿಸುತ್ತಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನ ಪಡೆಯುತ್ತದೆ. ಬಿಜೆಪಿಯವರು ವಿವಾದಗಳನ್ನು ಮಾಡುತ್ತಿರುವುದು ನಮಗೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂದರು.
ಇದನ್ನೂ ಓದಿ: ಈ ರೀತಿ ರಾಜಕಾರಣದಿಂದ ಬಿಜೆಪಿಯವರು ಅದೇನು ಸಾಧಿಸಲು ಹೊರಟಿದ್ದಾರೋ: ಜಮೀರ್ ಅಹ್ಮದ್ ಟೀಕೆ