ಬೆಳಗಾವಿ : ನಗರದ ಬಹುತೇಕ ದೇವಸ್ಥಾನಗಳು ಇಂದು ಬಾಗಿಲು ತೆರದಿವೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ. ಕಳೆದ ಎರಡೂವರೆ ತಿಂಗಳ ಬಳಿಕ ದೇವಸ್ಥಾನ ಓಪನ್ ಹಿನ್ನೆಲೆ ದೇವಸ್ಥಾನ ಭಕ್ತರಿಂದ ತುಂಬಿ ತುಳುಕುತ್ತಿದೆ. ಶಿವಲಿಂಗ ಮೂರ್ತಿಗೆ ಮಹಾ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆಸಲಾಗುತ್ತಿದೆ.
ವಿಜಯಪುರ : ಸರ್ಕಾರ ಇಂದಿನಿಂದ ಲಾಕ್ಡೌನ್ ತೆರವುಗೊಳಿಸಿದ ಹಿನ್ನೆಲೆ ನಗರದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಓಪನ್ ಮಾಡಲಾಗಿದೆ. ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಿ ಸಾಮಾಜಿಕ ಅಂತರ ಕಾಪಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಬಾಗಲಕೋಟೆ : ಐತಿಹಾಸಿಕ ಸ್ಥಳ ಬಾದಾಮಿ ಬನಶಂಕರಿ ದೇವಾಲಯ ಬಾಗಿಲು ತೆರೆಯಲಾಗಿದೆ. ದೇವಿಯ ದರ್ಶನ ಪಡೆಯಲು ದೇವಸ್ಥಾನಕ್ಕೆ ಭಕ್ತರು ಬರುತ್ತಿದ್ದಾರೆ. ಮಾಸ್ಕ್ ಕಡ್ಡಾಯ ಮಾಡಿದ್ದು,ಸಾರ್ವಜನಿಕರಿಂದ ಯಾವುದೇ ಸೇವೆ ಇರಲ್ಲ.
ಚಿಕ್ಕೋಡಿ : ಸದ್ಯ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದಂತೆ, ಇತ್ತ ಚಿಕ್ಕೋಡಿ ದೇವಸ್ಥಾನಗಳು ತೆರೆದಿವೆ. ಉತ್ತರ ಕರ್ನಾಟಕ ಹಾಗೂ ಗಡಿ ಭಾಗದಲ್ಲಿ ಅಪಾರ ಪ್ರಮಾಣದ ಭಕ್ತರನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ದ್ವಾರಕ್ಕೆ ಪೂಜೆ ಸಲ್ಲಿಸಿ ಅರ್ಚಕರು ಹಾಗೂ ಸ್ಥಳೀಯರು ದೇವಾಲಯ ತೆರೆದಿದ್ದಾರೆ.
ನೆರೆಯ ಮಹಾರಾಷ್ಟ್ರದ ಹೆಚ್ಚಿನ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸೇರಿ ಕೊರೊನಾ ನಿಯಮಗಳನ್ನು ಜಾರಿ ಮಾಡಲಾಗಿದೆ. ಅಭಿಷೇಕ, ತೀರ್ಥ, ಪ್ರಸಾದ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಬಸ್ ನಿಲ್ದಾಣದಲ್ಲಿ ಮೈಮರೆತ ಜನ : ಅನ್‌ಲಾಕ್ ಆಗ್ತಿದ್ದಂತೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮೈಮರೆತಿದ್ದಾರೆ. ಬೆಳಗಾವಿ ಬಸ್ ನಿಲ್ದಾಣದಿಂದ ಇಂದು 500ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿವೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಹಾವಳಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ, ಗೋವಾ ರಾಜ್ಯಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೇವಲ ಗಡಿವರೆಗೆ ಮಾತ್ರ ಬಸ್‌ಗಳ ಸಂಚಾರ ಇದ್ದು, ಬಹುತೇಕ ಬಸ್ಗಳು ಪ್ರಯಾಣಿಕರಿಂದ ಫುಲ್ ಆಗಿವೆ.