ವಿಜಯಪುರ: ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಹಾಮಳೆಯಿಂದ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮ ನಡುಗಡ್ಡೆಯಾಗಿದೆ. ಗ್ರಾಮದಲ್ಲಿ ಸಿಲುಕಿ ಹಾಕಿಕೊಂಡಿರುವ ಜನ ನೆರವಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ಹೆಚ್ಚುವರಿ ನೀರು ಬಿಡಲಾಗಿದೆ. ಪರಿಣಾಮ, ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಲ್ಲಿ ಇಂದು ಬೆಳಗ್ಗೆ 5,49,000 ಕ್ಯೂಸೆಕ್ ನೀರು ಶೇಖರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭೀಮಾನದಿ ಪ್ರವಾಹ ಎದುರಾಗಿದೆ. ಸೊನ್ನ ಬ್ಯಾರೇಜ್ ನೀರಿನಿಂದ ಹೆಚ್ಚುವರಿ ನೀರು ಭೀಮಾನದಿಗೆ ಹರಿಯುತ್ತಿರುವ ಕಾರಣ ತಾರಾಪುರ ಗ್ರಾಮ ಜಲಾವೃತವಾಗಿದೆ.
ತಾರಾಪುರದಲ್ಲಿ ಮಣ್ಣಿನಿಂದ ನಿರ್ಮಿಸಿರುವ ಮನೆಗಳು ಹೆಚ್ಚಿರುವ ಕಾರಣ ಗ್ರಾಮಕ್ಕೆ ನುಗ್ಗಿರುವ ಭೀಮಾನದಿ ನೀರಿನಿಂದ ಮನೆಗಳು ಕುಸಿದು ಬೀಳುತ್ತಿವೆ. ಇದರ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ಜಿಲ್ಲಾಡಳಿತದ ನೆರವಿಗೆ ಜನ ಕಾಯುತ್ತಿದ್ದಾರೆ.
ತಾರಾಪುರಕ್ಕೆ ಪ್ರವಾಹ ಭೀತಿ ಎದುರಾಗುತ್ತಿರುವದು ಇದೇನು ಮೊದಲಲ್ಲ. ಈ ಹಿಂದೆಯೂ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ತಾರಾಪುರ ಜಿಲ್ಲೆಯ ಸಂಪರ್ಕ ಕಳೆದುಕೊಂಡಿತ್ತು. 2004 ಮತ್ತು 2009ರಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ತಾರಾಪುರ ಜನ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಸೊನ್ನದಲ್ಲಿ ನಿರ್ಮಿಸಿರುವ ಬ್ಯಾರೇಜ್. ಇದರಿಂದ ತಾರಾಪುರ ಪದೇ ಪದೆ ಸಂಕಷ್ಟಕ್ಕೆ ಸಿಲುಕುತ್ತಿದೆ. ಈಗ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ತಾರಾಪುರ ಜನ ಸಂಪರ್ಕ ಕಳೆದುಕೊಂಡಿದ್ದಾರೆ.
ತಾರಾಪುರ ಗ್ರಾಮ ಪ್ರವಾಹಕ್ಕೆ ಸಿಲುಕುತ್ತಿರುವ ಕಾರಣ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸುರಕ್ಷಿತ ಸ್ಥಳದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟು ಹಕ್ಕು ಪತ್ರ ವಿತರಿಸಿದೆ. ಆದರೆ ಗ್ರಾಮಸ್ಥರು ಮಾತ್ರ ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ತಾರಾಪುರ ಬಿಟ್ಟು ಹೋಗಿಲ್ಲ. ಕೆಲ ಗ್ರಾಮಸ್ಥರಿಗೆ ಮನೆ ಹಂಚಿಕೆ ಮತ್ತೊಮ್ಮೆ ಮಾಡಿ ಎನ್ನುತ್ತಿದ್ದಾರೆ. ಕೆಲವರು ಈಗ ನೀಡಿರುವ ಮನೆಗಳಲ್ಲಿ ವಾಸಿಸಲು ಸಿದ್ಧರಿದ್ದೇವೆ ಎನ್ನುತ್ತಿದ್ದಾರೆ. ಇದರ ನಡುವೆ ಮತ್ತೊಮ್ಮೆ ಗ್ರಾಮ ಮುಳುಗಡೆಯಾಗಿದೆ.