ವಿಜಯಪುರ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಹಾಗೂ ವೀರ ಜಲಾಶಯಗಳು ತುಂಬಿವೆ. ಜಲಾಶಯಗಳಿಂದ ರಾಜ್ಯದ ಭೀಮಾನದಿಗೆ 41.809 ಕ್ಯೂಸೆಕ್ ನೀರನ್ನು ಹೆಚ್ಚುವರಿ ಹರಿಬಿಡಲಾಗಿದೆ. ಹೀಗಾಗಿ, ವಿಜಯಪುರದ ತಾರಾಪುರ ಗ್ರಾಮ ಜಲಾವೃತವಾಗಿದೆ.
ಮನೆಯಲ್ಲೇ ಇರುವ ಸುಮಾರು 100ಕ್ಕೂ ಹೆಚ್ಚು ಜನ ಗ್ರಾಮದಿಂದ ಹೊರ ಬರಲಾರದೆ ತೊಂದರೆ ಅನುಭವಿಸುತ್ತಿದ್ದಾರೆ. ತಾರಾಪುರ ಗ್ರಾಮದೊಂದಿಗೆ ಕಡಣಿ, ತಾವರಖೇಡ, ಬ್ಯಾಡಗಿಹಾಳಕ್ಕೂ ನೀರು ನುಗ್ಗಿದೆ. ಕಳೆದ 15 ವರ್ಷದಿಂದ ತಾರಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳು ಮಳೆ ಬಂದಾಗ ಜಲಾವೃತವಾಗುತ್ತಿವೆ.
ಆದರೆ, ಶಾಶ್ವತ ಸ್ಥಳಾಂತರ ಮಾತ್ರ ಇನ್ನೂ ಆಗಿಲ್ಲ. ಮಳೆ ಬಂದು ತಾರಾಪುರ ಜಲಾವೃತವಾದಾಗ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಸ್ಥಳಾಂತರ ಮಾಡುವ ಭರವಸೆ ನೀಡುತ್ತಿದ್ದಾರೆ ಹೊರತು ಸ್ಥಳಾಂತರ ಮಾತ್ರ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಉಮರಾಣಿ, ಹಿಂಗಣಿ, ಧೂಳಖೇಡ ಸೇರಿ ಬಹುತೇಕ ಎಲ್ಲಾ ಬ್ಯಾರೇಜ್ಗಳು ಭರ್ತಿಯಾಗಿವೆ. ಕಳೆದ ನಾಲ್ಕು ದಿನಗಳಿಂದ ಉಮರಾಣಿ-ಸೈದಾಪುರ ಬ್ಯಾರೇಜ್ ಮುಳುಗಡೆಯಾಗಿರುವ ಕಾರಣ ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಈಗಲೂ ಎರಡು ರಾಜ್ಯದ ಜನತೆ ಸುತ್ತಿ ಬಳಸಿ ಹೋಗಿ ವ್ಯಾಪಾರ, ವಹಿವಾಟು ಮಾಡುತ್ತಿದ್ದಾರೆ.