ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಜಯಪುರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ವಾರ್ಡ್ ಪುನರ್ ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವಾರ್ಡ್ ಪುನರ್ ವಿಂಗಡಣೆ ಸರಿಯಾಗಿ ಆಗಿಲ್ಲವೆಂದು ಕೆಲ ಸದಸ್ಯರು ಗುಲ್ಬರ್ಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಗುಲ್ಬರ್ಗ ನ್ಯಾಯಾಲಯ ಇದನ್ನು ಸರಿಪಡಿಸಿ ಶೀಘ್ರ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಆದರೆ ಸರ್ಕಾರ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳದೇ ಕೇವಲ ವಾರ್ಡ್ ಮರು ವಿಂಗಡಣೆ ಮಾಡಿ ಪತ್ರ ಹೊರಡಿಸಿತ್ತು. ಇದರಿಂದ ಪಾಲಿಕೆ ಸದಸ್ಯರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ದ್ವಿಸದಸ್ಯ ಪೀಠ 6 ತಿಂಗಳೊಳಗಾಗಿ ಚುನಾವಣೆ ನಡೆಸಲು ಆದೇಶಿಸಿತ್ತು. ಆಗಲೂ ಕೋವಿಡ್ ನೆಪವೊಡ್ಡಿ ಚುನಾವಣೆ ಪ್ರಕ್ರಿಯೆಯನ್ನು ಸರ್ಕಾರ ತಡ ಮಾಡಿದ ಕಾರಣ, ಪಾಲಿಕೆ ಮಾಜಿ ಸದಸ್ಯ ಆನಂದ ಧುಮಾಳೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಪಾಲಿಕೆ ಚುನಾವಣೆ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.