ವಿಜಯಪುರ : ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಬಾವನ ಆಸ್ತಿ ತನ್ನ ಕೈ ತಪ್ಪಿ ಹೋಗುತ್ತೆ ಎಂದು, ಬಾಮೈದನೊಬ್ಬ 10 ಲಕ್ಷ ರೂ. ಸುಪಾರಿ ನೀಡಿ ಬಾವನನ್ನು ಕೊಲೆ ಮಾಡಿಸಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.
ಇಂಡಿ ತಾಲೂಕಿನ ತಾಂಬಾ ನಿವಾಸಿ ಮಲ್ಲಿಕಾರ್ಜುನ ಸಾಯಬಣ್ಣ ಖರಾಟ್ ಬಾವನನ್ನು ಕೊಲೆ ಮಾಡಿಸಿದಾತ. ಸುಪಾರಿ ಹಂತಕರಾದ ಸೈಪನ್ ಬಸಗವಾನ, ಸಂಜೀವ ಕುಮಾರ್ ಮ್ಯಾಳೆಸಿ, ಸಮೀರ್ ಆಲಮೇಲ, ದಸ್ತಗೀರ್ ಬಾಗವಾನ, ಪ್ರಶಾಂತ್ ನಿಂಬಿತೋಟ ಹಾಗೂ ನಬಿಸಾಬ್ ವಣಕಿಹಾಳ ಸೇರಿ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಆಸ್ಟೇಲಿಯಾದಲ್ಲಿ ವಾಸವಿದ್ದ ಅನಿವಾಸಿ ಭಾರತೀಯ ಇಂಡಿ ತಾಲೂಕಿನ ತಾಂಬಾ ಮೂಲದ ಈರಣ್ಣ ಭೀಮಶ್ಯಾ ಗೋಟ್ಯಾಳ ಎಂಬಾತನ ಮೃತದೇಹ ಕೊಲ್ಹಾರ್ ಸೇತುವೆಯಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಮೊದಲು ಅಪರಿಚಿತ ವ್ಯಕ್ತಿಯದ್ದು ಎನ್ನಲಾದ ಮೃತದೇಹವನ್ನು, ಬಳಿಕ ಈರಣ್ಣನ ಕುಟುಂಬಸ್ಥರು ಪತ್ತೆ ಹಚ್ಚಿದ್ದರು. ಈರಣ್ಣನ ಸಾವಿನ ಜಾಡು ಹಿಡಿದು ಹೊರಟ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಮೃತನ ಪೂರ್ವಾಪರ ಕೆದಕಿದಾಗ ಆತನಿಗೆ ಇಬ್ಬರು ಪತ್ನಿಯರಿರುವುದು ತಿಳಿದು ಬಂದಿತ್ತು.
ಈರಣ್ಣ ಆಸ್ಟ್ರೇಲಿಯಾದಲ್ಲಿದ್ದ ಕಾರಣ ಆತನಿಗೆ ಸೇರಿದ ಜೈನಾಪುರದಲ್ಲಿದ್ದ ಹೊಲವನ್ನು ಆತನ ಮೊದಲ ಪತ್ನಿಯ ತಮ್ಮ ಮಲ್ಲಿಕಾರ್ಜುನ ನೋಡಿಕೊಳ್ಳುತ್ತಿದ್ದ. ಅದರಿಂದ ಬರುತ್ತಿದ್ದ ಲಾಭವನ್ನೂ ಮಲ್ಲಿಕಾರ್ಜುನ ಅನುಭವಿಸುತ್ತಿದ್ದ. ಆಸ್ಟ್ರೇಲಿಯಾದಲ್ಲಿ ಪತ್ನಿ ಜೊತೆ ಹೊಂದಾಣಿಕೆ ಕೊರತೆಯಾದ ಕಾರಣ ಈರಣ್ಣ ವಾಪಸ್ ಊರಿಗೆ ಬಂದು ತನ್ನ ಎರಡನೇ ಪತ್ನಿ ಜೊತೆ ತಿಕೋಟಾದಲ್ಲಿ ವಾಸವಿದ್ದ. ನಂತರ ತನ್ನ ಮೊದಲ ಪತ್ನಿಯ ಸಹೋದರ ಮಲ್ಲಿಕಾರ್ಜುನ ನೋಡಿಕೊಳ್ಳುತ್ತಿದ್ದ ತನ್ನ ಜಮೀನು ವಾಪಸ್ ನೀಡುವಂತೆ ಕೇಳಿದ್ದ. ಇದರಿಂದ ಕೋಪಗೊಂಡ ಮಲ್ಲಿಕಾರ್ಜುನ, ತನ್ನ ಬಳಿಯಿದ್ದ ಹೊಲ ಎಲ್ಲಿ ಕೈ ತಪ್ಪಿ ಹೋಗುತ್ತೋ ಎಂಬ ಆತಂಕದಿಂದ ಬಾವನ ಕೊಲೆಗೆ 10 ಲಕ್ಷ ರೂ. ಸುಪಾರಿ ನೀಡಿದ್ದ. ಮಲ್ಲಿಕಾರ್ಜುನನಿಂದ ಮೊದಲು 5 ಲಕ್ಷ ರೂ. ಪಡೆದ ಆರೋಪಿಗಳು, ಈರಣ್ಣನನ್ನು ಕಾರಿನಲ್ಲಿ ಅಪಹರಿಸಿ ಕತ್ತು ಕೊಯ್ದು ಕೊಲೆ ಮಾಡಿ ಕೊಲ್ಹಾರ ಸೇತುವೆಯಲ್ಲಿ ಎಸೆದು ಹೋಗಿದ್ದರು.
ಓದಿ : ಮಹಿಳಾ ದಿನಾಚರಣೆಯಂದೇ 2 ವರ್ಷದ ಮಗುವಿನೊಂದಿಗೆ ತಾಯಿ ನೇಣಿಗೆ ಶರಣು
ತನಿಖೆಯಲ್ಲಿ ಪೊಲೀಸರು ಕೊಲೆಯಾದ ಈರಣ್ಣನ ಕುಟುಂಬದ ಹಿನ್ನೆಲೆ ಕೆದಕಿದಾಗ ಇಡೀ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಿದೆ. ಆಸ್ತಿಗಾಗಿ ಸ್ವಂತ ಬಾವನನ್ನು ಕೊಲೆ ಮಾಡಿಸಿದ ಬಾಮೈದ ಮತ್ತು ಕೊಲೆ ಮಾಡಿದ ಸುಪಾರಿ ಹಂತಕರು ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ ಎರಡು ಕಾರು, ಸುಪಾರಿ ಹಣದಲ್ಲಿ ಉಳಿದಿದ್ದ 78,300 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.