ವಿಜಯಪುರ: ಮಾಜಿ ಸಿಎಂ ಕುಮಾರಸ್ವಾಮಿಗೆ ಒಂದೇ ಟಾರ್ಗೆಟ್ ಇದೆ. ಅಲ್ಪಸಂಖ್ಯಾತರನ್ನು ಬಲಿ ಮಾಡೋದು, ಅವರನ್ನು ಮುಗಿಸೋದು. ಅಲ್ಪಸಂಖ್ಯಾತರ ಜೊತೆ ಸಿದ್ದರಾಮಯ್ಯ ಅವರನ್ನೂ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಟೀಕಿಸಿದ್ದಾರೆ.
ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಶಾಸಕ ಜಮೀರ್ ಸುದ್ದಿಗೋಷ್ಠಿ ನಡೆಸಿ, ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಹೊರಹೋದರೆ ನಮ್ಮದೆ ನಡೆಯುತ್ತದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದಾರೆ. ಕುಮಾರಸ್ವಾಮಿ ಎಷ್ಟು ಜನರನ್ನು ಎಂಎಲ್ಎ ಮಾಡಿದ್ದಾರೆ? ಎಷ್ಟು ಜನರನ್ನು ಮಂತ್ರಿ ಮಾಡಿದ್ದಾರೆ? ಎಲ್ಲರಿಗೂ ಗೊತ್ತು ಎಂದು ಹೇಳಿದರು.
ನಾನು ಕುಮಾರಸ್ವಾಮಿ ಅವರಿಗೆ ಬಹಳ ಆತ್ಮೀಯನಾಗಿದ್ದೆ. ಆದರೂ ನನಗೆ ವಕ್ಫ ಹಜ್ ಖಾತೆ ನೀಡಿದರು. ಹಾನಗಲ್ನಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲೂ ಹೀಗೆ ಮಾಡಿದ್ದರು. ಅಲ್ಲಿ ಕುಮಾರಸ್ವಾಮಿ ಎಂದು ಮತ ಬಂದಿಲ್ಲ. ದರ್ಗಾ ಪೀಠಾಧಿಕಾರಿಯಾಗಿದ್ದಿರಂದ ಮತ ಬಂದಿದ್ದವು. ಯಾಕೆ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುವುದಿಲ್ಲ? ಉಪಚುನಾವಣೆಯಲ್ಲಿ ಮಾತ್ರ ಯಾಕೆ ಅಭ್ಯರ್ಥಿ ಹಾಕ್ತಿರಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ಮುಸ್ಲಿಂ ಸಮುದಾಯದ ಮೇಲೆ ಬಹಳ ಪ್ರೀತಿ ಬಂದಿದೆ. ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ವಿರೋಧಿ ಅಲ್ಲ, ಕುಮಾರಸ್ವಾಮಿ ಅಲ್ಪಸಂಖ್ಯಾತರ ವಿರೋಧಿ. ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಲಿ ಎಂದು ಆರ್ಎಸ್ಎಸ್ಗೆ ಕುಮಾರಸ್ವಾಮಿ ಬೈಯುತ್ತಿದ್ದಾರೆ. ಮುಸ್ಲಿಂ ಮತಗಳಿಗಾಗಿ ಕುಮಾರಸ್ವಾಮಿ ಆರ್ಎಸ್ಎಸ್ಗೆ ಬೈಯ್ಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.