ವಿಜಯಪುರ: ರಾಜ್ಯ ದೊಡ್ಡ ಸವಾಲು ಎದುರಿಸುತ್ತಿದೆ. ಈ ಸಂದರ್ಭದಲ್ಲಿಯೇ 6ನೇ ವೇತನ ಆಯೋಗ ಜಾರಿ ಮಾಡಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಬೇಡವಾಗಿತ್ತು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಗ್ಗೆ ನೌಕರರ ಜತೆ ಸರ್ಕಾರ ಮಾತುಕತೆ ನಡೆಸಿದೆ. ಮೇ.4ರ ನಂತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿದೆ. ಹೋರಾಟದ ಹೆಸರಲ್ಲಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ ಎಂದರು.
ಹಾಗಾಗಿ, ಈ ಕೂಡಲೇ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಲಾಗುವುದು. ಅವರು ಮುಂದಿಟ್ಟಿರುವ ಒಂಭತ್ತು ಬೇಡಿಕೆಗಳ ಪೈಕಿ ಎಂಟು ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ರಾಜ್ಯ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಆದ್ರೂ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆಯೂ ಚಿಂತಿಸಲಾಗುತ್ತಿದೆ. ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದೆ, ಆದರೆ ಯಾವಾಗ ಹೋರಾಟ ಮಾಡಬೇಕು ಎಂಬುದನ್ನು ಅವರೂ ಚಿಂತಿಸಬೇಕು ಎಂದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ದುಪ್ಪಟ್ಟು ದರ ವಸೂಲಿಗೆ ಮುಂದಾದ ಖಾಸಗಿ ಮಾಲೀಕರು
'ಉಪ ಚುನಾವಣೆಯಲ್ಲಿ ಗೆಲುವು'
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿಯ ಗೆಲುವು ನಿಶ್ಚಿತ ಎಂದರು.
'ಕಾನೂನು ಮೀರಿ ತರಗತಿ ನಡೆಸಿದ್ರೆ ಕ್ರಮ'
ಕೋವಿಡ್ ಸಮಯದಲ್ಲಿ ಖಾಸಗಿ ಶಾಲೆಗಳು ಪ್ರಾಥಮಿಕ ತರಗತಿ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಲೆ ಆರಂಭಕ್ಕೂ ಮುನ್ನ ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಹಾಗಾಗಿ ಪ್ರಾಥಮಿಕ ಹಂತದಲ್ಲಿ ತರಗತಿ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಸಹ ಕಾನೂನು ನಿಯಮ ಮೀರಿ ಯಾರಾದ್ರೂ ತರಗತಿಗಳನ್ನು ಆರಂಭಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.