ಮುದ್ದೇಬಿಹಾಳ : ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಹೇಳಿಕೆ ನೀಡಿದ್ದ ತಾಳಿಕೋಟಿ ತಾಪಂ ಅಧ್ಯಕ್ಷ, ಪುರಸಭೆ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸೇರಿದಂತೆ ಎಂಟು ಜನಕ್ಕೆ ಬಿಜೆಪಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಮುಖಾಂತರ ನೋಟಿಸ್ ನೀಡಲಾಗಿದ್ದು, ಮೇ 7ರಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಾಳಿಕೋಟಿ ಪಟ್ಟಣಕ್ಕೆ ಕೋವಿಡ್-19 ಕುರಿತು ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ, ಸದಸ್ಯ ಹಾಗೂ ಪುರಸಭೆಯ ನಾಮನಿರ್ದೇಶಿತ ಸದಸ್ಯರು, ಕಾರ್ಯಕರ್ತರು, ತಾಲೂಕು ಪಂಚಾಯತ್ ಅಧ್ಯಕ್ಷ ಸೇರಿ ಬಹಿರಂಗವಾಗಿ ಸಚಿವರನ್ನು ಟೀಕಿಸಿ ಅವರನ್ನು ತಡೆದು ಪತ್ರಿಕಾಗೋಷ್ಠಿ ನಡೆಸಿದ್ದರು.
ಈ ಹಿನ್ನೆಲೆ ರಾಜ್ಯ ಶಿಸ್ತು ಸಮಿತಿಯ ಸೂಚನೆಯ ಮೇರೆಗೆ ಕಾರಣ ಕೇಳಿ ಮೇ 12 ರಂದು ನೋಟಿಸ್ ಜಾರಿ ಮಾಡಲಾಗಿದೆ. ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಯಾರ‍್ಯಾರಿಗೆ ನೋಟಿಸ್:
ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜುಗೌಡ ಕೋಳೂರ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಪುರಸಭೆ ನಾಮನಿರ್ದೇಶಿತ ಸದಸ್ಯ ಮಾನಸಿಂಗ ಕೊಕಟನೂರ, ರಾಘವೇಂದ್ರ ವಿಜಾಪುರ, ನಿರಂಜನಸಾ ಮಕಾನದಾರ, ಶರಣಗೌಡ ಗೊಟಗುಣಕಿ, ಕಾರ್ಯಕರ್ತ ಶಿವಶಂಕರ ಹಿರೇಮಠ ಅವರಿಗೆ ನೋಟಿಸ್ ನೀಡಲಾಗಿದೆ.