ವಿಜಯಪುರ: ಇಂದಿನಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು, ಈ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಕಡ್ಡಾಯವಾಗಿ ಮಾಸ್ಕ್, ಹಾಗೂ ಸ್ಯಾನಿಟೈಸರ್ ನೀಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರವೇಶ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 121 ಪರೀಕ್ಷಾ ಕೇಂದ್ರಗಳಿದ್ದು, 37,122 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಪಾಸಿಟಿವ್ ಬಂದ್ ಹಿನ್ನೆಲೆ ಜಿಲ್ಲಾಡಳಿತ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಿದೆ. ಕಂಟೇನ್ಮೆಂಟ್ ಝೋನ್ನಲ್ಲಿದ್ದ ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರ ಮಾಡಿದೆ.
ಒಟ್ಟು 103 ವಿದ್ಯಾರ್ಥಿಗಳು ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿದ್ದು, ಇವರು ಬಯಸುವುದಾದರೆ ಆಗಸ್ಟ್ ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗೆ ಪ್ರಥಮ ಪರೀಕ್ಷೆ ಎಂದು ಪರಿಗಣಿಸಿ ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶವನ್ನು ಜಿಲ್ಲಾಡಳಿತ ಮಾಡಿಕೊಟ್ಟಿದೆ.
ಉಚಿತ ಮಾಸ್ಕ್ ವಿತರಣೆ: ವಿದ್ಯಾರ್ಥಿಗಳಿಗೆ ಈ ಬಾರಿ ಉಚಿತ ಮಾಸ್ಕ್ ವಿತರಣೆ ಸಹ ಮಾಡಲಾಯಿತು. ಪರೀಕ್ಷೆ ಬರೆಯುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.