ವಿಜಯಪುರ: ಅಕ್ರಮವಾಗಿ ಬಡ್ಡಿ ದಂಧೆಯಲ್ಲಿ ಹಾಗೂ ತಹಶೀಲ್ದಾರ್ ಕಾರು ಚಾಲಕನ ಹತ್ಯೆಯಲ್ಲಿ ಭಾಗಿಯಾಗಿದ್ದ ರೌಡಿಗೆ ಎಸ್ಪಿ ಅನುಪಮ್ ಅಗರವಾಲ್ ಕಪಾಳಕ್ಕೆ ಬಾರಿಸಿ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರ ಕವಾಯತ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ಅನುಪಮ್ ಅಗರವಾಲ್, ಭೀಮಶಿ ಭಜಂತ್ರಿ ಎಂಬ ರೌಡಿಗೆ ಆತ ಮಾಡುತ್ತಿದ್ದ ಬಡ್ಡಿ ದಂಧೆ ಕುರಿತು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ವಿರುದ್ಧ ಸಿಟ್ಟಿಗೆದ್ದ ಎಸ್ಪಿ ಆತನಿಗೆ ಕಪಾಳ ಮೋಕ್ಷ ಮಾಡಿದರು.
ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಲೈಸನ್ಸ್ ಇಲ್ಲದೇ ಬಡ್ಡಿ ವ್ಯವಹಾರಲ್ಲಿ ಭಾಗಿಯಾಗಿರುವ ರೌಡಿಗಳಿಗೆ ದಂಧೆ ಕೈಬಿಡುವಂತೆ ಎಸ್ಪಿ ಅನುಪಮ್ ಅಗರವಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರೌಡಿಗಳ ಚಲನವಲನಗಳ ಮೇಲೆ ನಿಗಾ:
ರೌಡಿಗಳಿಗೆ ಎಸ್ಪಿ ಅನುಪಮ್ ಅಗರವಾಲ್ ಮಾತಿನ ಬಿಸಿ ಮುಟ್ಟಿಸಿದರು. ಬಳಿಕೆ ರೌಡಿಗಳು ಭಾಗಿಯಾಗಿರುವ ಪ್ರಕರಣಗಳ ಮಾಹಿತಿ ಪೆಡೆದುಕೊಂಡರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದುಕಿ ನಿಮ್ಮ ಮೇಲೆ ಸದಾ ಪೊಲೀಸ್ ನಿಗಾ ಇರುತ್ತದೆ ಎಂದು ಎಚ್ಚರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಪರೇಡ್‌ನಲ್ಲಿ 113 ಜನ ರೌಡಿಗಳು ಭಾಗಿಯಾಗಿದ್ದಾರೆ. ಕಳೆದ 20 ದಿನಗಳಲ್ಲಿ 2 ಶೂಟ್ ಔಟ್ ಪ್ರಕರಣಗಳು ನಡೆದಿವೆ. ಇವುಗಳಲ್ಲಿ ಯುವಕರಿಗೆ ಪ್ರಚೋದನೆ ಮಾಡಿ ಕೃತ್ಯ ನಡೆಸಲಾಗುತ್ತಿದೆ. ಅಲ್ಲದೆ ಆಕ್ರಮ ಶಸ್ತ್ರಾಸ್ತ್ರಗಳ ಬಳಕೆ ಮಾಡಲಾಗಿದೆ. ಅವಗಳ ಮೇಲೆ ನಿಗಾವಹಿಸಿ ಕೃತ್ಯಗಳ ತಡೆಗೆ ಪರೇಡ್ ಮಾಡಲಾಗಿದೆ ಎಂದರು.