ವಿಜಯಪುರ: ಸಿಂದಗಿ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಜಿಲ್ಲಾ ಎಸ್ಪಿ ಆನಂದಕುಮಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿ ದೇವಿಂದ್ರ ಸಂಗೋಗಿ ಭಾನುವಾರ ಸಿಂದಗಿ ಪೊಲೀಸ್ ಠಾಣೆಯ ಟಾಯ್ಲೆಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಅದಕ್ಕಾಗಿ ಕರ್ತವ್ಯ ಲೋಪ ಹಿನ್ನೆಲೆ ಪಿಎಸ್‌ಐ ಸಂಗಮೇಶ ಹೊಸಮನಿ, ಸಿಬ್ಬಂದಿ ಎನ್.ಬಿ. ನಾದ್, ಗುರುರಾಜ್ ಮಾಶ್ಯಾಳ್, ಆನಂದ ಪಾಟೀಲ್, ಪಿ.ಎಲ್. ಪಟ್ಟದ್ ಅವರನ್ನು ಅಮಾನತುಗೊಳಿಸಲಾಗಿದೆ. ಈಗಾಗಲೇ ಈ ಅಪ್ರಾಪ್ತೆ ಮೇಲಿನ ಅತ್ಯಾಚಾರದ ಆರೋಪಿ ಸಂಗೋಗಿ ಆತ್ಮಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಹಸ್ತಾಂತರ ಮಾಡಲಿದೆ.
ಜಿಲ್ಲಾಸ್ಪತ್ರೆ ಕರೆತರುವ ವೇಳೆಗೆ ಸಾವು: ಸಿಂದಗಿ ತಾಲೂಕಿನ ಹೆದ್ದಾರಿಯಲ್ಲಿ ಡಾಬಾ ಇಟ್ಟುಕೊಂಡಿದ್ದ ಆರೋಪಿ ದೇವಿಂದ್ರ ಸಂಗೋಗಿ ಕಳೆದ ನಾಲ್ಕು ದಿನಗಳ ಹಿಂದೆ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಹೀಗಾಗಿ ಆತನನ್ನು ಬಂಧಿಸಿದ್ದ ಪೊಲೀಸರು ಶುಕ್ರವಾರ ಠಾಣೆಗೆ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದರು. ಆದರೆ ಠಾಣೆಯಲ್ಲಿ ನಸುಗಿನ ಜಾವ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಅಲ್ಲಿಯೇ ಇದ್ದ ಹಗ್ಗದ ಮೂಲಕ ನೇಣು ಹಾಕಿಕೊಂಡಿದ್ದಾನೆ. ಶಬ್ದ ಬಂದ ಬಳಿಕ ಬಾಗಿಲು ಮುರಿದು ಆತನನ್ನು ಸ್ಥಳೀಯ ಆಸ್ಪತ್ರೆ ಮೂಲಕ ಜಿಲ್ಲಾಸ್ಪತ್ರೆಗೆ ಕರೆತರುವ ವೇಳೆಗೆ ಆತ ಮೃತಪಟ್ಟಿದ್ದ.
ಖುದ್ದು ಗೃಹ ಸಚಿವರಿಂದ ತನಿಖೆಗೆ ಆದೇಶ: ಇದು ಮೈಸೂರು ಗ್ಯಾಂಗ್ ರೇಪ್ನಷ್ಟು ವೇಗ ಪಡೆದುಕೊಂಡಿದ್ದರಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ.
ಓದಿ: ವಿಜಯಪುರ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಬಂಧಿತ ಆರೋಪಿ ಆತ್ಮಹತ್ಯೆ