ವಿಜಯಪುರ: ಸಿಂದಗಿ ಉಪಚುನಾವಣೆ ಹಿನ್ನೆಲೆ, ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾದ ಕಾರಣ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ನಾಮಪತ್ರ ಸಲ್ಲಿಸುವ ಸಿದ್ಧತೆಯಲ್ಲಿದ್ದ ವೇಳೆ, ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಮಗೆ ಅಲ್ಪಸಂಖ್ಯಾತರು ಹಾಗೂ ಮಹಿಳಾ ಮತದಾರರು ಕೈ ಹಿಡಿಯುವ ವಿಶ್ವಾಸವಿದೆ. ಹೀಗಾಗಿ ಗೆಲುವು ತಮ್ಮದೇ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ನೇರ ಪ್ರತಿ ಸ್ಪರ್ಧಿಯಾಗಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಅಶೋಕ ಮನಗೂಳಿ ಅವರ ಹಿಂದೆ ಯಾವುದೇ ಪಕ್ಷದ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ತಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲೆಗೆ ತಂದಿರುವ ನೀರಾವರಿ ಯೋಜನೆಗಳು ತಮಗೆ ಶ್ರೀರಕ್ಷೆಯಾಗಲಿವೆ. ಸಿಂದಗಿ ಎಂಎಲ್ಎ ಅಭ್ಯರ್ಥಿಗೆ ಮಹಿಳೆಗೆ ಅವಕಾಶ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು, ಇದು ಜೆಡಿಎಸ್ ಹಿರಿಮೆ ಎಂದರು.
ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ: ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ
ಜೆಡಿಎಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ಮುಖಂಡರು ಬಿಜೆಪಿ ಟೀಂ ಎಂದು ವ್ಯಂಗ್ಯವಾಡುತ್ತಿರುವುದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಇನ್ನು ಮತ ವಿಭಜನೆಗೆ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೇಟ್ ನೀಡಿದೆ ಎನ್ನುವ ಆರೋಪಕ್ಕೂ ಪ್ರತ್ಯುತ್ತರ ನೀಡಿದ ನಾಜಿಯಾ, ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ.
ಮೊದಲು ಸಿಂದಗಿ ಕ್ಷೇತ್ರದ ಇತಿಹಾಸ ನೋಡಿದರೆ ಇಲ್ಲಿ ಕಾಂಗ್ರೆಸ್ಗೆ ನೆಲೆ ಇಲ್ಲ. ಜೆಡಿಎಸ್ ಬಿಟ್ಟರೆ ಬಿಜೆಪಿಯನ್ನು ಜನ ಗೆಲ್ಲಿಸಿದ್ದಾರೆ ಹೊರತು ಕಾಂಗ್ರೆಸ್ಗೆ ಎಂದೂ ಬೆಂಬಲ ನೀಡಿಲ್ಲ ಎಂದರು. ಸದ್ಯ ಮತದಾರರ ಒಲವು ಜೆಡಿಎಸ್ ಪರ ಇದೆ, ಹೀಗಾಗಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.